ಕಲಬುರಗಿ: ಕಬ್ಬಿನ ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಹಕ್ಕೊತ್ತಾಯ ಮಂಡಿಸಿ ಫೆ.6ರಂದು ಕಬ್ಬು ಬೆಳೆಗಾರರು ಹಾಗೂ ರೈತ ಮಹಿಳೆಯರಿಂದ ಬೆಂಗಳೂರು ಚಲೋ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಧರ್ಮರಾಜ ಬಿ.ಸಾಹು ತಿಳಿಸಿದರು.
ರಾಜ್ಯದ 2024ನೇ ಬಜೆಟ್‌ನಲ್ಲಿ ರೈತರ ಹಿತಾಸಕ್ತಿಗೆ ಆದ್ಯತೆ ನೀಡಬೇಕು. ತೆಲಂಗಾಣದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಆಡಳಿತದಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ. ಅದೇ ಮಾದರಿ ಕರ್ನಾಟಕದಲ್ಲೂ ಸಾಲ ಮನ್ನಾ ಮಾಡಬೇಕು, ಎಫ್‌ಆರ್‌ಪಿ ದರ ರೈತನ ಹೊಲದಲ್ಲಿನ ದರ ಎಂದು ಬದಲಾಗಬೇಕು. ಕಬ್ಬು ಕಟಾವು ಸಾಗಣಿಕೆ ದರ ಮನಬಂದಂತೆ ಕಡಿತ ಮಾಡಬಾರದು ಎಂದು ಒತ್ತಾಯ ಮಾಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಟನ್ ಕಬ್ಬಿಗೆ ರೂ.150 ಹೆಚ್ಚುವರಿ ದರ ರೈತರಿಗೆ ಸಕ್ಕರೆ ಕಾರ್ಖಾನೆಗಳು ಪಾವತಿಸದಿದ್ದರೆ ಸರ್ಕಾರ ನೀಡಬೇಕು, ತೆಲಂಗಾಣದ ಮಾದರಿ ಪ್ರತಿ ರೈತನಿಗೆ ಐದು ಲಕ್ಷ ರೂ. ಮೊತ್ತದ ವಿಮೆ ಒದಗಿಸಬೇಕು, ಎಲ್ಲ ಬೆಳೆಗೆ ವಿಮೆ ನೀಡಬೇಕು, ನೈಸರ್ಗಿಕ ವಿಕೋಪದ ವೇಳೆ ವೈಜ್ಞಾನಿಕ ಪರಿಹಾರ ನೀಡಬೇಕು, 5 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ಕೊಡಿಸಬೇಕು, ಸಕ್ಕರೆ ಇಳುವರಿ ತೋರಿಸುವ ಮಾನದಂಡ ಬದಲಾಗಬೇಕು ಎಂದು ಆಗ್ರಹಿಸಿದರು.
ಕಬ್ಬಿನ ಎಥೆನಾಲ್ ಉತ್ಪಾದನಾ ಲಾಭದ ಆದಾಯ ಕಬ್ಬಿನ ದರ ನಿಗದಿಯಲ್ಲಿ ಪರಿಗಣಿಸಬೇಕು, 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು, ರಾಜ್ಯ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ಫೆ.6ರಂದು ಬೆಂಗಳೂರು ಚಲೋ ನಡೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಂಘದ ಜಿಲ್ಲಾಧ್ಯಕ್ಷ ರಮೇಶ ಹೂಗಾರ, ಶರಣು ಬಿಲ್ಲಾಡ, ಬಸವರಾಜ ಪಾಟೀಲ್, ನಾಗೇಂದ್ರರಾವ ದೇಶಮುಖ, ಶಾಂತವೀರಪ್ಪ ದಸ್ತಾಪುರ, ಕೇಶಪ್ಪ ಕೊರಳ್ಳಿ ಇತರರಿದ್ದರು.