ಎಚ್.ಡಿ.ಕೋಟೆ: ಕಬಡ್ಡಿ ಪಂದ್ಯಾವಳಿಯಲ್ಲಿ ನಮ್ಮ ಶಾಲೆ ಮಕ್ಕಳಿಗೆ ತೀರ್ಪುಗಾರರು ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ ತಾಲೂಕಿನ ಮೇಟಿಕುಪ್ಪೆ ಗ್ರಾಮಸ್ಥರು ಪಂದ್ಯಾವಳಿಯನ್ನು ಅರ್ಧಕ್ಕೆ ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಶನಿವಾರ ನಡೆಯಿತು.
ಪಟ್ಟಣದ ಸೆಂಟ್ ಮೇರಿಸ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ತೀರ್ಪುಗಾರರು ನಮ್ಮ ಶಾಲಾ ಮಕ್ಕಳನ್ನು ಸೋಲಿಸುವ ಉದ್ದೇಶದಿಂದ ಎದುರಾಳಿ ತಂಡದ ಆಟಗಾರರಿಗೆ ಹೆಚ್ಚು ಅಂಕ ನೀಡಿ ಅನ್ಯಾಯ ಎಸಗಿದ್ದಾರೆ. ತೀರ್ಪುಗಾರರ ಮೇಲೆ ಕ್ರಮ ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉದಯಕುಮಾರ್ ಅವರಲ್ಲಿ ಮೇಟಿಕುಪ್ಪೆ ಗ್ರಾಮಸ್ಥರು ದೂರು ನೀಡಿ ಒತ್ತಾಯಿಸಿದರು.
ಬಳಿಕ ಬಿಇಒ ಉದಯಕುಮಾರ್ ಅವರು ದೈಹಿಕ ಶಿಕ್ಷಣ ಅಧಿಕಾರಿ ರಾಮಪ್ರಸಾದ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಅಂತೋಣಿ ಅವರನ್ನು ತಮ್ಮ ಕಚೇರಿಗೆ ಕರೆದು ಗ್ರಾಮಸ್ಥರು ಸಮ್ಮುಖದಲ್ಲಿ ವಿಚಾರಣೆ ನಡೆಸಿದರು.
ಈ ಸಂದರ್ಭದಲ್ಲಿ ರಾಮ ಪ್ರಸಾದ್ ಹಾಗೂ ಅಂತೋಣಿ, ನಮ್ಮ ದೈಹಿಕ ಶಿಕ್ಷಣ ಶಿಕ್ಷಕರು ಇಂದು ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ನೀಡಿರುವ ತೀರ್ಪು ಸರಿ ಇದೆ. ಗ್ರಾಮಸ್ಥರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮೇಟಿಕುಪ್ಪೆ ಗ್ರಾಮಸ್ಥರು, ಕಳೆದ ವಾರ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲೂ ಗ್ರಾಮೀಣ ಶಾಲೆ ಮಕ್ಕಳ ಪ್ರತಿಭೆಗೆ ಮಾನ್ಯತೆ ನೀಡಿ ತೀರ್ಪು ಕೊಡದೆ ಅನ್ಯಾಯ ಮಾಡಿದ್ದೀರಾ. ಇಂದು ನಡೆದ ಕಬಡ್ಡಿ ಪಂದ್ಯಾವಳಿಯಲ್ಲೂ ನಮ್ಮ ಶಾಲೆಯ ಮಕ್ಕಳು ಉತ್ತಮ ಪ್ರದರ್ಶನ ನೀಡಿದರೂ ಅಂಕ ಕೊಡದೆ ಕಳಪೆ ಪ್ರದರ್ಶನ ನೀಡಿದ ಪಟ್ಟಣದ ಸೆಂಟ್ ಮೇರಿಸ್ ಶಾಲೆಯ ಮಕ್ಕಳಿಗೆ ಬೋನಸ್ ಪಾಯಿಂಟ್ ನೀಡಿ ಅನ್ಯಾಯ ಮಾಡಿದ್ದೀರಾ ಎಂದು ದೈಹಿಕ ಶಿಕ್ಷಣ ಅಧಿಕಾರಿ ವಿರುದ್ಧ ದೂರಿದರು.
ನಂತರ ಮಾತನಾಡಿದ ಬಿಇಒ ಉದಯಕುಮಾರ್, ಯಾವುದೇ ಕಾರಣಕ್ಕೂ ಉತ್ತಮ ಆಟ ಪ್ರದರ್ಶಿಸಿದ ಮಕ್ಕಳಿಗೆ ಅನ್ಯಾಯ ಆಗುವುದಕ್ಕೆ ಅವಕಾಶ ನೀಡುವುದಿಲ್ಲ. ಆಟ ನಡೆಯುವ ಸಂದರ್ಭದಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳು ಆಗಿರಬಹುದು. ಹಾಗಾಗಿ ಗ್ರಾಮಸ್ಥರು ನಮ್ಮ ಶಾಲೆಯ ಮಕ್ಕಳಿಗೆ ಅನ್ಯಾಯ ಆಗಿದೆ ಎಂದು ಭಾವಿಸುವುದು ಬೇಡ. ಅರ್ಧಕ್ಕೆ ನಿಂತಿರುವ ಕಬಡ್ಡಿ ಪಂದ್ಯಾವಳಿಯನ್ನು ಮಂಗಳವಾರ ಪಟ್ಟಣದ ವಿಶ್ವ ಭಾರತಿ ಶಾಲೆ ಆವರಣದಲ್ಲಿ ನಡೆಸಿ ಪಾರದರ್ಶಕವಾಗಿ ತೀರ್ಪು ನೀಡಲಾಗುತ್ತದೆ. ದಯವಿಟ್ಟು ಸಹಕರಿಸಬೇಕು ಎಂದು ಮನವಿ ಮಾಡಿದ ನಂತರ ಗ್ರಾಮಸ್ಥರು ಹೊರ ನಡೆದರು.
ಮೇಟಿಕುಪ್ಪೆ ಗ್ರಾಮದ ಗುರು ಸ್ವಾಮಿ, ಶಿವನಂಜಪ್ಪ, ಮಲ್ಲೇಶ, ಮಾದಪ್ಪ, ನಾಗನಾಯಕ, ಚನ್ನಬಸವಚಾರಿ, ಮಂಜುನಾಥ, ಬಸವಲಿಂಗ, ಮಾದೇವಸ್ವಾಮಿ, ಪ್ರಕಾಶ್, ಬಿಆರ್ಸಿ ಕೃಷ್ಣಯ್ಯ, ಶಿಕ್ಷಕರಾದ ನಂಜರಾಜು, ಗೋಪಾಲಯ್ಯ, ರಾಮಮೂರ್ತಿ ಇದ್ದರು.