ರಿಪ್ಪನ್‌ಪೇಟೆ: ರಾಜ್ಯ ಮಟ್ಟದ ಬಾಲಕಿಯರ ಕಬಡ್ಡಿ ಸ್ಪರ್ಧೆಯಲ್ಲಿ ( 17 ವರ್ಷ ವಯೋಮಿತಿ) ಜಯಗಳಿಸಿ ಪಟ್ಟಣಕ್ಕೆ ಆಗಮಿಸಿದ ಶ್ರೀ ರಾಮಕೃಷ್ಣ ಶಿಕ್ಷಣ ಸಂಸ್ಥೆಯ ಕ್ರೀಡಾಪಟುಗಳನ್ನು ಭಾನುವಾರ ರಾತ್ರಿ ಅದ್ದೂರಿಯಾಗಿ ಸ್ವಾಗತಿಸಲಾಯಿತು
ಸಂಸ್ಥೆಯ ಮುಖ್ಯಸ್ಥ ದೇವರಾಜ ಮಾತನಾಡಿ, ಗ್ರಾಮೀಣ ಪ್ರದೇಶ ವಿದ್ಯಾರ್ಥಿನಿಯರು ರಾಜ್ಯವನ್ನು ಪ್ರತಿನಿಧಿಸಿ ಜಯಗಳಿಸಿರುವುದು ಗ್ರಾಮ ಹಾಗೂ ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದರು.
ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ. ಕಳೆದ ಬಾರಿಯೂ ರಾಜ್ಯಮಟ್ಟದಲ್ಲಿ ನಮ್ಮ ಶಾಲೆ ವಿದ್ಯಾರ್ಥಿಗಳು ಜಯಗಳಿಸಿದ್ದರು. ಇದು ಎರಡನೇ ಬಾರಿ. ತಮ್ಮೆಲ್ಲರ ಆಶೀರ್ವಾದಿಂದ ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲೂ ಜಯಗಳಿಸುವ ವಿಶ್ವಾಸವಿದೆ ಎಂದು ಹೇಳಿದರು.
ಪಟ್ಟಣದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಕ್ರೀಡಾಪಟುಗಳನ್ನು ತೆರೆದ ವಾಹನದಲ್ಲಿ ವಿನಾಯಕ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು. ವಿದ್ಯಾರ್ಥಿನಿಯರಾದ ಶ್ರಾವ್ಯಾ, ಶ್ರೇಯಾ, ದೀಕ್ಷಾ, ಸಂಜನಾ, ಐಶ್ವರ್ಯಾ ಅವರು ಕಡೂರಿನಲ್ಲಿನ ನಡೆದ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಬೆಂಗಳೂರು ವಿಭಾಗವನ್ನು ಪ್ರತಿನಿಧಿಸಿದ್ದರು. ವಿದ್ಯಾರ್ಥಿನಿಯರ ಸಾಧನೆಗೆ ಶಾಲಾಡಳಿತ ಮಂಡಳಿ, ಸಿಬ್ಬಂದಿ, ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಗ್ರಾಪಂ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಸಂಸ್ಥೆಯ ಸರಿತಾ ದೇವರಾಜ, ಮುಖ್ಯ ಶಿಕ್ಷಕ ರವಿ, ಸಂದೇಶ್, ದೈಹಿಕ ಶಿಕ್ಷಣ ಶಿಕ್ಷಕ ವಿನಯ್, ಮುಖಂಡರಾದ ಬೇಕರಿ ಸುರೇಶ, ಹಿರಿಯಣ್ಣ, ರವಿ, ಸುಧೀರ, ರಾಘವೇಂದ್ರ ಇತರರಿದ್ದರು.