ನ್ಯೂಸ್

ಕೆಂಪೇಗೌಡರ ಕನಸಿನ ನಗರ ಬೆಂಗಳೂರಿನಲ್ಲಿ ಕೆರೆಗಳ ಮಾಯ, ಕಾಂಕ್ರಿಟ್ ಬಡಾವಣೆಗಳಾಗಿ ಪರಿವರ್ತನೆ

ಚಿಕ್ಕಬಳ್ಳಾಪುರ: ನಾಡುಪ್ರಭು ಕೆಂಪೇಗೌಡರು ದೂರದೃಷ್ಟಿಯಲ್ಲಿ ಉತ್ತಮ ಪರಿಸರಕ್ಕೆ ಪೂರಕವಾದ ಭವ್ಯ ಬೆಂಗಳೂರು ನಗರವನ್ನು ನಿರ್ಮಿಸಿದರು. ಇದನ್ನು ಹಾಗೆಯೇ ಉಳಿಸಿಕೊಳ್ಳುವುದರ ಬದಲಿಗೆ ಕೆರೆ ಪ್ರದೇಶಗಳನ್ನು ಮಾಯವಾಗಿಸಿ, ನಿಲ್ದಾಣ ಮತ್ತು ಕಾಂಕ್ರಿಟ್ ಬಡಾವಣೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ಬೇಸರಿಸಿದರು.

ಚಿಕ್ಕಬಳ್ಳಾಪುರದಲ್ಲಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಕೈಗೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರು 16 ನೇ ಶತಮಾನದಲ್ಲಿ ಕಂಡಿದ್ದ ದೂರದೃಷ್ಟಿಯ ಕನಸ್ಸಿನ ಫಲವೇ ಇಂದಿನ 1.40 ಕೋಟಿ ಜನರು ವಾಸಿಸುತ್ತಿರುವ ಬೃಹತ್ ಬೆಂಗಳೂರು ನಗರ. ಆಗ ಎಲ್ಲ ಸಮುದಾಯಗಳ ವೃತ್ತಿಗಳು ಮತ್ತು ಅವರ ವ್ಯಾಪಾರ ವಹಿವಾಟುಗಳಿಗೆ ಅನುಕೂಲವಾಗುವ ಪೇಟೆಗಳನ್ನೊಳಗೊಂಡಂತೆ ಸುಸಜ್ಜಿತ ಊರನ್ನು ನಿರ್ಮಿಸಿದ್ದು ಇದಕ್ಕೆ ಅತ್ಯಗತ್ಯವಾಗಿ ಬೇಕಾಗಿದ್ದ ಕೆರೆ ಕುಂಟೆಗಳು, ಕಲ್ಯಾಣಿಗಳ ಜತೆಗೆ ಜಲ ಮೂಲಗಳನ್ನು ಸಂರಕ್ಷಿಸಲಾಗಿತ್ತು ಎಂದರು.

500 ವರ್ಷಗಳ ಹಿಂದೆಯೇ ಬೆಂಗಳೂರು ನಗರದ ಬಸವನಗುಡಿ, ಜಯನಗರ ಸೇರಿದಂತೆ ಮಾದರಿ ಬಡಾವಣೆಗಳನ್ನು ನಿರ್ಮಿಸಲಾಗಿದೆ. ಇಂದು ಏಕೆ ಸಾಧ್ಯವಾಗುತ್ತಿಲ್ಲ? ಎಂದು ಪ್ರಶ್ನಿಸಿದ ಅವರು, ಈಗಂತೂ ಹಣ ಹಾಗೂ ಇತರ ಸ್ವಾರ್ಥಗಳಿಂದ ಅನಧಿಕೃತ ಬಡಾವಣೆಗಳು ತಲೆ ಎತ್ತುತ್ತಿವೆ. ಊರಿನ ಸ್ವರೂಪಗಳು ಹಾಳಾಗುತ್ತಿವೆ ಎಂದು ಬೇಸರಿಸಿದರು.

ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಬಳಸಿಕೊಳ್ಳುವಂತಹ ಸ್ಥಿತಿಗೆ ಇಂದು ತಲುಪಿರುವುದಕ್ಕೆ ನಾವುಗಳೇ ಕಾರಣ. ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿ.ಪಂ.ಸಿಇಒ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಉಪ ವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಯಲುವಹಳ್ಳಿ ಎನ್.ರಮೇಶ್, ಡಾ. ಶ್ರೀನಿವಾಸ್ ಮೂರ್ತಿ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಪಿ.ಎನ್.ಕೇಶವ ರೆಡ್ಡಿ ಮತ್ತಿತರರು ಇದ್ದರು.