ನ್ಯೂಸ್

ಕನ್ನಡಿಗರಿಗೆ ಉದ್ಯೋಗ ದೊರಕುವುದು ಕಷ್ಟವಾಗಿದೆ

ಕನ್ನಡದ ಮೇಲೆ ಇತರ ಭಾಷಿಕರ ದಬ್ಬಾಳಿಕೆ ಹೆಚ್ಚಾಗಿದೆ. ಕನ್ನಡಿಗರಿಗೆ ಉದ್ಯೋಗ ದೊರಕುವುದು ಕಷ್ಟವಾಗಿದೆ. ಇಂತಹ ಸಮಯದಲ್ಲಿ ಕನ್ನಡದ ಅಸ್ಮಿತೆಗಾಗಿ ಎಲ್ಲರೂ ಹೋರಾಡಬೇಕಾಗಿದೆ ಎಂದು ಸಾಹಿತಿ ಡಾ.ಯಲ್ಲಪ್ಪ ಕೆ.ಕೆ.ಪುರ ಹೇಳಿದರು.

ಸರಸ್ವತಿಪುರಂನಲ್ಲಿರುವ ದಿ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಷನ್ ಓಂಕಾರ್‌ಮಲ್ ಸೋಮಾನಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಭಾಷೆಯ ಸೊಗಡನ್ನು, ಸಾಹಿತ್ಯದ ವೈವಿಧ್ಯತೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿ. ಕನ್ನಡ ನಾಡು-ನುಡಿಗಳ ಬಗ್ಗೆ ಅಭಿಮಾನವನ್ನು ಬೆಳೆಸಿ, ಅವುಗಳ ಅಸ್ತಿತ್ವವನ್ನು ಉಳಿಸಿ ಬೆಳೆಸುವ ಸಂಕಲ್ಪವನ್ನು ಈ ದಿನದಂದು ನಾವು ಕೈಗೊಳ್ಳಬೇಕು. ಬೇರೆ ಭಾಷೆಗಳನ್ನು ಕಲಿಯುವುದು ತಪ್ಪಲ್ಲ, ಆದರೆ ಕನ್ನಡವನ್ನು ಮರೆಯಬಾರದು ಎಂದರು.

ಕನ್ನಡ ರಾಜ್ಯೋತ್ಸವವು ಕೇವಲ ಒಂದು ಹಬ್ಬವಲ್ಲ, ಬದಲಾಗಿ ಇದು ಕರ್ನಾಟಕ ರಾಜ್ಯದ ಉದಯವನ್ನು ಸಂಕೇತಿಸುವ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಘನತೆಯನ್ನು ಸಾರುವ ಮಹತ್ವದ ದಿನವಾಗಿದೆ. ಕನ್ನಡ ಭಾಷೆ ಮಾತನಾಡುವ ಎಲ್ಲ ಪ್ರದೇಶಗಳನ್ನು ಒಂದುಗೂಡಿಸಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಿದ ಈ ದಿನವನ್ನು ರಾಜ್ಯಾದ್ಯಂತ ದೊಡ್ಡ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದು ರಾಜ್ಯದ ಏಕೀಕರಣಕ್ಕಾಗಿ ಹೋರಾಡಿದ ಮಹಾತ್ಮರನ್ನು ಸ್ಮರಿಸುವ ದಿನವೂ ಆಗಿದೆ ಎಂದು ತಿಳಿಸಿದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಂ.ಪುಟ್ಟಸ್ವಾಮಿ ಮಾತನಾಡಿ, ಕನ್ನಡ ಕೇವಲ ಭಾಷೆಯಾಗದೆ ಭಾವನೆಯೂ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಸ್ಥಿತಿಗತಿ ಬದಲಾಗಿದೆ. ಕನ್ನಡ ನಮ್ಮ ಉಸಿರಾಗಿರಬೇಕು. ಎಂತಹ ಸಂದರ್ಭದಲ್ಲೂ ಕನ್ನಡ ಬಿಟ್ಟುಕೊಡಬಾರದು. ಬೇರೆ ಭಾಷೆಗಳನ್ನು ಕಲಿಯುವುದು ಖಂಡಿತ ತಪ್ಪಲ್ಲ. ಆದರೆ ಬೇರೆ ಭಾಷೆ ಕಲಿತು ಕನ್ನಡ ಮರೆಯುವುದು ತಪ್ಪು ಎಂದು ತಿಳಿಸಿದರು.

ಪ್ರಾಂಶುಪಾಲರಾದ ಡಾ.ಆರ್.ಜಿ.ಉಷಾ ಮಾತನಾಡಿ, ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಾವು ಕೇವಲ ನವೆಂಬರ್ ಕನ್ನಡಿಗರಾಗದೆ, ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡುತ್ತೇನೆ, ಬರೆಯುತ್ತೇನೆ, ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ, ಕನ್ನಡೇತರರಿಗೆ ಕನ್ನಡ ಕಲಿಸುತ್ತೇನೆ ಎಂದು ಪ್ರತಿಜ್ಞೆ ಮಾಡಬೇಕು ಎಂದರು.

ಕಾರ್ಯಕ್ರಮದದಲ್ಲಿ ಸಂಯೋಜಕಿ ಡಾ.ಎಂ.ವಿನುತಾ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಇದ್ದರು.