ನ್ಯೂಸ್

ಕನ್ನಡದ ಭವಿಷ್ಯ ಉಜ್ವಲಗೊಳ್ಳಲು ಎಲ್ಲರೂ ಕೈ ಜೋಡಿಸಿ

ಕೊಳ್ಳೇಗಾಲ: ಪಟ್ಟಣದ ಶ್ರೀ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಂಗಳವಾರ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಲಯನ್ ಎಸ್.ನಾಗರಾಜು ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಕನ್ನಡಿಗರಿಗೆ ಕನ್ನಡದಲ್ಲಿ ಸೇವೆ ಒದಗಿಸಲು ಅಗತ್ಯ ಮಾನವ ಸಂಪನ್ಮೂಲ ನಮ್ಮಲ್ಲಿ ಇದೆಯೇ ಎಂಬ ವಾದ-ವಿವಾದವಿದೆ. ಲಿಪಿ ಮತ್ತು ನುಡಿಯಲ್ಲಿರುವ ಕನ್ನಡ ಮತ್ತು ಕನ್ನಡದಲ್ಲಿನ ಜ್ಞಾನವನ್ನು ಡಿಜಿಟಲೀಕರಣ ಮಾಡಲು ಅಸಾಧ್ಯವಾದ ಮಾತಾಗಿದೆ. ಇಲ್ಲಿಯವರೆಗೆ ತಾಳೆ ಗರಿಯಿಂದ ಹಿಡಿದು ಅದಕ್ಕೆ ಅಗತ್ಯ ಸಂಪೂರ್ಣ ಮಾಹಿತಿಯನ್ನು ಹಸ್ತಾಂತರಿಸಲು ಕೃತಕ ಬುದ್ಧಿಮತ್ತೆಗೆ ಮಾತ್ರ ಸಾಧ್ಯವಾಗಲಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಕೃತಕ ಬುದ್ಧಿಮತ್ತೆಯಲ್ಲಿ ಕನ್ನಡ ಪಂಡಿತರಿಗೆ ಸಾಧ್ಯವಾಗದ ಅನೇಕ ಸಂಗತಿಗಳು ಹಾಗೂ ಕನ್ನಡ ನಾಗರಿಕತೆಯ ಬಗ್ಗೆ ಇನ್ನಷ್ಟು ಹೊಳಹು ಮೂಡಲು ಅಪಾರ ಅವಕಾಶಗಳಿವೆ. ಕನ್ನಡದ ಭವಿಷ್ಯ ಉಜ್ವಲವಾಗಬೇಕಾದರೆ ಎಲ್ಲರೂ ಕೈ ಜೋಡಿಸಬೇಕು. ಅಲ್ಲದೆ ಪ್ರಯತ್ನಶೀಲರಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯವು ವಚನಕಾರರಿಂದ ದಾಸ ಸಾಹಿತ್ಯದಿಂದ ಹೊಸ ಹೊಸ ತಂತ್ರಜ್ಞಾನದಿಂದ ಅಭಿವೃದ್ಧಿಯಾಗಲು ಸಾಧ್ಯವಿದೆ ಎಂದರು.

ಮುಖ್ಯ ಭಾಷಣಕಾರ ದೊರೆಸ್ವಾಮಿ ಮದ್ದೂರು ಮಾತನಾಡಿ, ಜನಪದ ಸಾಹಿತ್ಯಗಳು, ಶ್ರೀ ಮಂಟೇಸ್ವಾಮಿ ಕಾವ್ಯಗಳು, ಮಹದೇಶ್ವರ ಕಾವ್ಯಗಳು ಭಾಷೆಗೆ ಪರಿಪೂರ್ಣ ಜ್ಞಾನವನ್ನು ಒದಗಿಸಿದೆ. ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಕನ್ನಡ ಪ್ರಕೃತಿಯಂತೆಯೇ ಮಾರ್ಪಾಡುಗಳಿಗೆ ಒಳಗಾಗಿ ಅಸ್ತಿತ್ವ ಕಂಡುಕೊಂಡಿದೆ. ಅದರಲ್ಲೂ ಇಂದಿನ ಡಿಜಿಟಲ್ ಯುಗದಲ್ಲಿ ಕನ್ನಡ ಕ್ಷಿಪ್ರಗತಿಯಲ್ಲಿ ನಾನಾ ಬಗೆಯ ರೂಪಾಂತರಗಳಿಗೆ ಒಳಗಾಗಿ ವಿಸ್ತಾರಗೊಂಡಿದೆ. ನಾವು, ನೀವು ಕನ್ನಡದ ಸಾಕ್ಷಿ ಪ್ರಜ್ಞೆಗಳಂತ್ತಿದ್ದ ಮಹನೀಯರನ್ನು ನೆನೆಯಬೇಕಾಗಿದೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲೆ ಜಯಲಕ್ಷ್ಮಿ ಮಾತನಾಡಿ, ಕುವೆಂಪು ಬೇಂದ್ರೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜ್ಞಾನಪೀಠ ಪ್ರಶಸ್ತಿ ವಿಜೇತರ ಬಗ್ಗೆ ವಿವರ ನೀಡಿದರು. ಕನ್ನಡ ಸಾಹಿತ್ಯಕ್ಕೆ ವಚನಕಾರರು ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅಲ್ಲದೆ, ಇಂದಿನ ಯುಗದಲ್ಲಿ ಭಾಷಾಜ್ಞಾನವನ್ನು ನಾವು, ನೀವೆಲ್ಲರೂ ಬೆಳೆಸಿಕೊಳ್ಳಬೇಕಿದೆ. ವಿದ್ಯಾರ್ಥಿಗಳು ತಮ್ಮ ಓದಿನಲ್ಲಿ ಕ್ರಿಯಾಶೀಲರಾಗಿ ಶಿಸ್ತನ್ನು ಸಮಯಪ್ರಜ್ಞೆಯನ್ನು ಬೆಳೆಸಿಕೊಂಡರೆ ಜೀವನದಲ್ಲಿ ಎತ್ತರಕ್ಕೆ ಸಾಗಲು ಅನುಕೂಲವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಗ್ರಂಥಪಾಲಕ ಮಹದೇವಯ್ಯ, ಕನ್ನಡ ಭಾಷಾ ಉಪನ್ಯಾಸಕಿ, ವಿಜಯಲಕ್ಷ್ಮಿ ಹಾಗೂ ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.

=================

5ಕೆಜಿಎಲ್-3 ಕೊಳ್ಳೇಗಾಲ ಪಟ್ಟಣದ ಶ್ರೀ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ತಾಲೂಕು ಕಸಾಪ ಅಧ್ಯಕ್ಷ ಎಸ್.ನಾಗರಾಜು ಚಾಲನೆ ನೀಡಿದರು. ಜಯಲಕ್ಷ್ಮೀ, ಮದ್ದೂರು ದೊರೆಸ್ವಾಮಿ, ಮಹದೇವಯ್ಯ ಇತರರು ಇದ್ದಾರೆ.