ಕುವೆಂಪುರ ಅವರು ಕನ್ನಡ ಸಾಹಿತ್ಯ ಲೋಕದ ಮೇರು ಕವಿಯಾಗಿದ್ದು ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ತಿಳಿಸಿದರು.
ಚಾಮರಾಜನಗರ ಒಕ್ಕಲಿಗರ ಸಮುದಾಯ ಭವನದಲ್ಲಿ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜಯಂತಿ ಹಾಗೂ ಸಂಘದ 2025ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕುವೆಂಪು ಅವರು ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ವಿಮರ್ಶಕರಾಗಿದ್ದರು. ಶ್ರೀರಾಮಾಯಣ ದರ್ಶನಂ ಮಹಾಕಾವ್ಯವ ್ನು ಬರೆದು ಕನ್ನಡಕ್ಕೆ ಮೊದಲ ಜ್ಞ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟರು ಎಂದರು.
ಪ್ರಕೃತಿ ಪ್ರೇಮಿಯಾಗಿದ್ದ ಅವರ ಕವಿತೆ, ಕಾದಂಬರಿಗಳಲ್ಲಿ ಮಲೆನಾಡಿನ ಕಾಡಿನ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ. ಸಾಹಿತ್ಯದ ಮೂಲಕ ಸಮಾಜದಲ್ಲಿರುವ ಜಾತಿ, ಮೇಲು ಕೀಳು, ಮೌಢ್ಯತೆಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದರು. ಮನುಷ್ಯ ವಿಶ್ವಮಾನವನಾಗಿ ಹುಟ್ಟುತ್ತಾನೆ. ಬೆಳೆಯುತ್ತಾ ಅಲ್ಪ ಮಾನವನಾಗುತ್ತಾನೆ ಎಂದಿದ್ದಾರೆ. ಕನ್ನಡ ನಾಡು, ನುಡಿಗೆ ಅವರ ಕೊಡುಗೆ ಅಪಾರ. ಕುವೆಂಪು, ಅಂಬೇಡ್ಕರ್, ಕೆಂಪೇಗೌಡ ಅವರಂತಹ ಮಹನೀಯರು ಮತ್ತೆ ಹುಟ್ಟಬೇಕು. ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಒಕ್ಕಲಿಗರ ಸಮುದಾಯ ಭವನಕ್ಕೆ ಶಾಸಕರ ನಿಧಿಯಿಂದ 25 ಲಕ್ಷ ರೂ. ನೀಡುವುದಾಗಿ ತಿಳಿಸಿದರು. ಚಾಮರಾಜನಗರ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಸುದರ್ಶನ್ ಗೌಡ, ಗೌರವ ಅಧ್ಯಕ್ಷ ಕೆ.ಪುಟ್ಟಸ್ವಾಮಿ ಗೌಡ, ಪ್ರಧಾನ ಕಾರ್ಯದರ್ಶಿ ಆರ್. ಸೋಮಶೇಖರ್, ನಾರಾಯಣ ಪ್ರಸಾದ್, ಮಣಿ ಮಾಸ್ಟರ್, ಚಿನ್ನಮುತ್ತು, ರಾಜು ಇತರರು ಇದ್ದರು.