ಬಾಳೆಹೊನ್ನೂರು: ಶತಮಾನದಿಂದ ಮಹಿಳೆಯರು ಕನ್ನಡ ಸಾಹಿತ್ಯಕ್ಕೆ ಅಭೂತಪೂರ್ವ ಕೊಡುಗೆ ನೀಡಿದ್ದಾರೆ ಎಂದು ಹೋಬಳಿ ಕಸಾಪ ಪ್ರಧಾನ ಕಾರ್ಯದರ್ಶಿ ಶ್ರೀಚೇತನಾ ಹೇಳಿದರು.
ಸಮೀಪದ ಮೇಲ್ಪಾಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಎನ್.ಆರ್.ಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಬುಧವಾರ ಆಯೋಜಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯದಲ್ಲಿ ಮಹಿಳೆಯರ ಕೊಡುಗೆ ಕುರಿತು ಉಪನ್ಯಾನೀಡಿದರು.
ಅಕ್ಕಮಹಾದೇವಿ ಎಂಬ ಮಹಾನ್ ಚೇತನ ಕನ್ನಡ ಸಾಹಿತ್ಯಕ್ಕೆ ಅಧಿಕೃತವಾದ ಮಾನ್ಯತೆ ನೀಡಿದರು. ನಂತರ ಸಂಚಿ ಹೊನ್ನಮ್ಮ, ಅಂಬಾ ಬಾಯಿ, ಹೇಳವನಕಟ್ಟೆ ಗಿರಿಯಮ್ಮರಂತಹ ಕವಯತ್ರಿಯರು ಹಲವು ಕೊಡುಗೆ ನೀಡಿದರು. ಆಧುನಿಕ ಕನ್ನಡದಲ್ಲಿ ಎಂ.ಕೆ.ಇಂದಿರಾ, ತ್ರಿವೇಣಿ ಮುಂತಾದವರು ತಮ್ಮ ಕೊಡುಗೆ ಮುಂದುವರೆಸಿದರು ಎಂದರು.
1975ರ ಅಂತಾರಾಷ್ಟ್ರೀಯ ಮಹಿಳಾ ದಿನದ ಬಳಿಕ ಸಾಹಿತ್ಯ ಕ್ಷೇತ್ರದಲ್ಲಿ ಬಹು ಎತ್ತರವಾದ ಮನ್ನಣೆ ಸಿಕ್ಕಿದೆ. ಹೆಣ್ಣಿಗೆ ಬದುಕನನ್ನು ಪ್ರಕಾಶಿಸುವ ಶಕ್ತಿ ಇದೆ. ಮಹಿಳೆಯರು ಸರ್ವ ಕ್ಷೇತ್ರದಲ್ಲೂ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಮುಂದೆಯೂ ಮಾಡುತ್ತಾರೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೆಶ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ಮನೆ ಮನೆಗೂ ತಲುಪಿಸುವ ಕೆಲಸ ಮಾಡುತ್ತಿದೆ. ಸಾಹಿತ್ಯ ಎನ್ನುವುದು ತಾಯಿಯ ಹಾಗೆ. ಸಾಹಿತ್ಯವನ್ನು ತಾಯಿಯಂತೆ ಗೌರವಿಸಬೇಕು ಎಂದರು.
ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಟಿ.ವೆಂಕಟೇಶ್ ಮಾತನಾಡಿ, ಶ್ರಾವಣ ಎಂದರೆ ಹಬ್ಬಗಳ ಹೆಬ್ಬಾಗಿಲು. ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವೈಜ್ಞಾನಿಕ ಕಾರಣಗಳು ಇವೆ ಎಂದರು.
ಮುಖ್ಯ ಶಿಕ್ಷಕ ಸುರೇಶಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾರತೀಯ ಹಬ್ಬಗಳು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಿಸಲಾಯಿತು.
ಕರ್ಕೇಶ್ವರ ಗ್ರಾಪಂ ಅಧ್ಯಕ್ಷ ರಾಜೇಶ್ ಕೇಶವತ್ತಿ, ಸೀನಿಯರ್ ಚೇಂಬರ್ ಅಧ್ಯಕ್ಷ ಡಿ.ರಾಜೇಂದ್ರ, ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಸತೀಶ್ ಅರಳಿಕೊಪ್ಪ, ಸಂಘಟನಾ ಕಾರ್ಯದರ್ಶಿ ಕೆ.ಎಂ.ರಾಘವೇಂದ್ರ, ಸುಧೀರ್, ಹೋಬಳಿ ಕಸಾಪ ಅಧ್ಯಕ್ಷ ರತ್ನಾಕರ್ ಗಡಿಗೇಶ್ವರ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯಜ್ಞಪುರುಷಭಟ್, ಪಿಎಸಿಎಸ್ ಅಧ್ಯಕ್ಷ ಪ್ರಕಾಶ್ ಗುಬ್ಬೂರು, ಶಿಕ್ಷಕಿ ಸ್ವಪ್ನಾ ಇತರರಿದ್ದರು.