ನ್ಯೂಸ್

ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ

ಎಚ್.ಡಿ. ಕೋಟೆ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ 535ನೇ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಶಾಸಕ ಅನಿಲ್ ಚಿಕ್ಕಮಾದು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಡಿ.ಎಂ. ಕೃಷ್ಣಮೂರ್ತಿ, ಎಚ್.ಸಿ. ಮಂಜುನಾಥ್, ಎಂ.ಬಿ. ಆನಂದ್, ಸೀತಾರಾಮ್, ಸಣ್ಣರಾಮಪ್ಪ, ರಾಜೇಶ್ ಜೆರಾಲ್ಡ್, ಮಹೇಶ್ ಇತರರಿದ್ದರು.

ಎಚ್.ಡಿ.ಕೋಟೆ: ಕನಕದಾಸರು ಹರಿದಾಸ ಸಾಹಿತ್ಯಕ್ಕೆ ಸೀಮಿತವಾಗದೆ ಸಮಗ್ರ ಕನ್ನಡ ಸಾಹಿತ್ಯಕ್ಕೂ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸಾಹಿತಿ ಡಿ.ಎಂ. ಕೃಷ್ಣಮೂರ್ತಿ ತಿಳಿಸಿದರು.


ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಶುಕ್ರವಾರ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ 535ನೇ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.
ಕನಕದಾಸರು ಸಮಾಜದಲ್ಲಿ ಮೇಲು ಕೀಳು, ಅಸಮಾನತೆಯನ್ನು ತಮ್ಮ ಕೀರ್ತನೆಗಳ ಮೂಲಕ ಹೋಗಲಾಡಿಸಿ ಸಮಾಜ ಸುಧಾರಕ ರಾದರು. ದೇವರು ಎಲ್ಲ ಕಡೆ, ಸಕಲ ಪ್ರಾಣಿಗಳಲ್ಲೂ ಇದ್ದಾನೆ ಎಂದು ಕೇವಲ ಮಾತಿನಲ್ಲಿ ಹೇಳದೆ ದೃಢವಾಗಿ ನಂಬಿಕೆ ಇಟ್ಟಿದ್ದರು. ಹಾಗಾಗಿ ಅವರೇ ದೇವರನ್ನು ಸಾಕ್ಷಾತ್ಕಾರ ಮಾಡಿಕೊಂಡಿದ್ದರು ಎಂದು ತಿಳಿಸಿದರು.


ಅವರದ್ದು ಬಹುಮುಖ ಚಿಂತನೆಯಾಗಿತ್ತು. ಸಾಧನೆ ಹಾಗೂ ಸಮಾಜ ಸುಧಾರಣೆ ಮನೋಧರ್ಮ ಹೊಂದಿದ್ದರು ಎಂದು ಕನಕದಾಸರ ಬಗ್ಗೆ ಗುಣಗಾನ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ದಾವಣಗೆರೆ, ಧಾರವಾಡ ಸೇರಿದಂತೆ ಹಾವೇರಿ ಭಾಗದಲ್ಲಿ ಕನಕದಾಸರ ಗುರು ಪೀಠ ಸೇರಿದಂತೆ ಅನೇಕ ಮಠಗಳು ಇದ್ದು, ದಾರ್ಶನಿಕರ ನೆಲೆ ಬೀಡಾಗಿದೆ ಎಂದರು.


ಯಾವುದೇ ಜಿಲ್ಲಾ ಕೇಂದ್ರದಲ್ಲೂ ನಿರ್ಮಾಣವಾಗದ ಕನಕ ಭವನ ಎಚ್.ಡಿ. ಕೋಟೆ ಪಟ್ಟಣದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಿ ಸಾರ್ವಜನಿಕರಿಗೆ ಉಪಯೋಗ ಆಗುತ್ತಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.


ತಾಲೂಕಿನ ಮಹನೀಯರ ಸಮುದಾಯ ಭವನಗಳ ಮುಂದೆ ಪ್ರತಿಮೆ ನಿರ್ಮಾಣ ಆಗುವಂತೆ ಕನಕ ಭವನ ಮುಂಭಾಗ ಕನಕದಾಸರ ಪ್ರತಿಮೆ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.


ಪ್ರಭಾರ ತಹಸೀಲ್ದಾರ್ ಸಣ್ಣರಾಮಪ್ಪ, ಇಒ ರಾಜೇಶ್ ಜೆರಾಲ್ಡ್, ಉಪ ತಹಸೀಲ್ದಾರ್ ಮಹೇಶ್, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಎಂ.ಬಿ. ಆನಂದ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಚ್.ಸಿ. ಮಂಜುನಾಥ್, ಭೋವಿ ನಿಗಮದ ಮಾಜಿ ಅಧ್ಯಕ್ಷ ಸೀತಾರಾಮ್, ಕನ್ನಡ ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್, ಮುಖಂಡರಾದ ಚನ್ನೇಗೌಡ, ಕೊಮಾರೇಗೌಡ, ಮಂಜು, ಚಂದ್ರೇಗೌಡ, ದೇವರಾಜು, ಮಾದೇವು, ಶಿವಮಲ್ಲಪ್ಪ, ಕೊಡಸೀಗೆ ರಾಜೇಗೌಡ, ಕ್ಯಾತನಹಳ್ಳಿ ನಾಗರಾಜು, ಸರಗೂರು ಪಟ್ಟಣ ಪಂಚಾಯಿತಿ ಸದಸ್ಯ ಶ್ರೀನಿವಾಸ್, ಬೀರೇಗೌಡ, ಅಧಿಕಾರಿಗಳಾದ ರಾಮೇಗೌಡ, ನಾರಾಯಣಸ್ವಾಮಿ, ರಾಮಸ್ವಾಮಿ, ಮಹಾದೇವಯ್ಯ, ಬೋರಯ್ಯ, ರಂಗಸ್ವಾಮಿ ಇದ್ದರು.