ವಿಜಯವಾಣಿ ಸುದ್ದಿಜಲ ಕೋಲಾರ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕೊಡಮಾಡುವ ೨೦೨೪-೨೫ನೇ ಸಾಲಿನ ಎರಡು ಪ್ರಶಸ್ತಿಗಳು ಕೋಲಾರ ಜಿಲ್ಲೆಯ ಇಬ್ಬರು ಕನ್ನಡ ಪರಿಚಾರಕರಿಗೆ ಲಭಿಸಿದೆ.
ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಭಾಗದಲ್ಲಿ ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗೆ ಕೋಲಾರದ ಕೆ.ರಾಜಕುಮಾರ್ ಮತ್ತು ಸಾಹಿತ್ಯ ಹಾಗೂ ನಾಟಕ ವಿಭಾಗದಲ್ಲಿ ಪ್ರೊ.ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿಯನ್ನು ಸ.ರಘುನಾಥ ಅವರಿಗೆ ಕೊಡಮಾಡಲಾಗಿದೆ. ಎರಡೂ ಪ್ರಶಸ್ತಿಗಳು ತಲಾ ೫ ಲಕ್ಷರೂ. ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ.
ನಮ್ಮ ಮಕ್ಕಳ ಶಿಕ್ಷಕ-ರಕ್ಷಕ:
ನಿವೃತ್ತ ಶಿಕ್ಷಕರಾದ ಸ.ರಘುನಾಥ ಮೂಲತಹ ಮಾಲೂರು ತಾಲ್ಲೂಕು ಮೈಲಾಂಡಹಳ್ಳಿಯವರು. ಶ್ರೀನಿವಾಸಪುರ ತಾಲ್ಲೂಕಿನ ಗಡಿಭಾಗಗಳಲ್ಲಿ ಸರ್ಕಾರಿ ಶಾಲೆ ಶಿಕ್ಷಕರಾಗಿದ್ದ ರಘುನಾಥ ಕನ್ನಡ ಮತ್ತು ಗ್ರಾಮೀಣ ಮಕ್ಕಳ ಅಭ್ಯುದಯಕ್ಕಾಗಿ ತಮ್ಮ ಒಂಟಿ ಕಾಲಿನಲ್ಲಿಯೇ ಹೋರಾಟ ನಡೆಸಿದ ಕಾಯಕಯೋಗಿ.
ಗಡಿ ಭಾಗದ ಸಾವಿರಾರು ಮಕ್ಕಳನ್ನು `ನಮ್ಮ ಮಕ್ಕಳು' ಸಂಸ್ಥೆಯ ಮೂಲಕ ದತ್ತು ತೆಗೆದುಕೊಂಡು ಅವರಿಗೆ ಅಕ್ಷರ ಮತ್ತು ಅನ್ನ ದಾಸೋಹ ನಡೆಸಿದವರು. ಅವರಿಂದಾಗಿ ನೂರಾರು ಮಕ್ಕಳು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ.
ಕನ್ನಡ-ತೆಲುಗು ಭಾಷಾ ವಿಧ್ವಾಂಸರೂ ಆದ ರಘುನಾಥ ಇದೀಗ
ಬೆಂಗಳೂರು ಉತ್ತರ ವಿ.ವಿ ಸಹಯೋಗದಲ್ಲಿ ಮೊರಸುನಾಡು ಕನ್ನಡ
ನಿಘಂಟು ರಚನಾ ಕಾರ್ಯದಲ್ಲಿ ತೊಡಗಿದ್ದಾರೆ.
ಶ್ರೀನಿವಾಸಪುರ ತಾಲ್ಲೂಕಿನ ಗಡಿಭಾಗಗಳಲ್ಲಿ ಕರ್ನಾಟಕ ಮತ್ತು ಆಂಧ್ರ ಸರ್ಕಾರಗಳಿಂದ ಭಾಷೆ ಮತ್ತು ಪ್ರಾದೇಶಿಕತೆಯ ಕಾರಣಕ್ಕಾಗಿ ಉಪೇಕ್ಷಿತರಾಗಿರುವ ಜಾನಪದ ಕಲಾವಿದರಿಗೆ ಊರುಗೋಲಾಗಿ ಸಹ ರಘುನಾಥ ಕೆಲಸ ಮಾಡಿದ್ದಾರೆ.
ಕನ್ನಡ ಸೇವೆಯ ಕುಮಾರ:
ಕೋಲಾರ ನಗರದವರಾದ ಹಿರಿಯ ಕನ್ನಡಪರ ಹೋರಾಟಗಾರ ರಾಜಕುಮಾರ್ ಕನ್ನಡಕ್ಕಾಗಿಯೇ ಕಳೆದ ೪೫ ವರ್ಷಗಳಿಂದ ತಮ್ಮ ಬದುಕನ್ನು ಮುಡಿಪಾಗಿಟ್ಟವರು.
ರಾಜ್ಯದಲ್ಲಿ ಕನ್ನಡದ ಸಾರ್ವಭೌಮತೆ ಕುರಿತು ವಿ.ಕೃ.ಗೋಕಾಕ್ ವರದಿಯನ್ನು ಮನದಟ್ಟು ಮಾಡಿಸಿ ವರನಟ ಡಾ.ರಾಜ್‌ಕುಮಾರ್‌ರನ್ನು ಚಳವಳಿಗೆ ಕರೆತರುವಲ್ಲಿ ಯಶಸ್ವಿಯಾದ ರಾಜ್‌ಕುಮಾರ್ ಗೋಕಾಕ್ ವರದಿ ಮತ್ತು ಕಾವೇರಿ ನದಿ ನೀರಿನ ವಿಚಾರದಲ್ಲಿ ಸುಪ್ರೀಂಕೋರ್ಟ್ನಲ್ಲಿ ವಾದ ಮಾಡುತ್ತಿದ್ದ ನ್ಯಾ.ಸಂತೋಷ್ ಹೆಗಡೆ ಅವರಿಗೆ ವಾದಕ್ಕೆ ಪೂರಕವಾಗಿ ಇನ್‌ಪುಟ್‌ಗಳನ್ನು ಸಮರ್ಥವಾಗಿ ಒದಗಿಸುವ ಮೂಲಕ ನಾಡು-ನುಡಿಯ ಸೇವೆ ಮಾಡಿದವರು.
ಚಿಕ್ಕಂದಿನಿAದಲೂ ಕನ್ನಡಪರ ಚಳವಳಿ, ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಇವರು ಕನ್ನಡ ಕಟ್ಟುವಿಕೆಯಲ್ಲಿ ಸಮಗ್ರ ದೃಷ್ಟಿ. ಕಚೇರಿಗಳಿಗೆ ಭೇಟಿ ನೀಡಿ ಕನ್ನಡ ಸಂಬAಧಿ ಕಡತಗಳ ಬೆನ್ನುಹತ್ತಿ ಸರ್ಕಾರದ ಕನ್ನಡಪರ ನಿರ್ಧಾರಗಳು ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದವರು.
ಸ್ಪಷ್ಟ ಕನ್ನಡ ಬರೆವಣಿಗೆ ಶಿಬಿರ, ಕಮ್ಮಟ. ಕ್ವಿಜ್‌ಗಳಲ್ಲಿ ಛಾಪು ಮೂಡಿಸಿರುವ ರಾಜ್‌ಕುಮಾರ್ ಯಾವುದೇ ಘಟನಾವಳಿಗಳನ್ನು ದಿನಾಂಕದ ಸಮೇತ ವಿವರಿಸಬಲ್ಲ ನೆನಪಿನ ಶೂರ.
ಕಳೆದ ೨೧ ವರ್ಷಗಳಿಂದ ಪ್ರತಿ ರಾತ್ರಿ ೯ ರಿಂದ ೧೨ರವರೆಗೆ ಫೋನು ಕರೆ ಮಾಡಿ ಕನ್ನಡ ಕುರಿತಂತೆ ಕೇಳುವ ಪ್ರಶ್ನೆಗಳಿಗೆ ಉಚಿತವಾಗಿ ಉತ್ತರಿಸಿ, ಪರಿಹಾರವನ್ನು ಸೂಚಿಸುತ್ತ ಬಂದಿದ್ದಾರೆ.
ಕೋಟ್:
ಕರ್ನಾಟಕ ಸರ್ಕಾರದ ಪ್ರಶಸ್ತಿಯನ್ನು ಈ ನೆಲದಮ್ಮನ ಮಡಿಲಿಗೆ ಸಮರ್ಪಿಸಿಕೊಳ್ಳುತ್ತಿದ್ದೇನೆ. ಆಕೆ ತನ್ನ ಮಗನ ಮೇಲೆ ತೋರಿಸಿದ ಪ್ರೀತಿಯೇ ಈ ಪ್ರಶಸ್ತಿ. ಇದಕ್ಕೆ ಕಾರಣರಾದ ಎಲ್ಲರಿಗೂ ಕೃತಜ್ಞನಾಗಿದ್ದೇನೆ. ನನಗೆ ನುಡಿಕೊಟ್ಟ ಕನ್ನಡ ಸರಸ್ವತಿಗೆ ಮತ್ತು ತೆಲುಗು ಭಾರತಿಗೆ ಶಿರಬಾಗಿ ನಮಸ್ಕರಿಸುತ್ತಿದ್ದೇನೆ.
-ಸ.ರಘುನಾಥ, ಹಿರಿಯ ಸಾಹಿತಿ.
ಕೋಟ್:
ಕನ್ನಡಮ್ಮನಿಗೆ ನನ್ನ ಅಳಿಲು ಸೇವೆಯನ್ನು ಗುರುತಿಸಿ ನೀಡಿರುವ ಈ ಪ್ರಶಸ್ತಿಯು ನನ್ನಲ್ಲಿನ ಕನ್ನಡ ಪರ ಕೆಚ್ಚು ಮತ್ತು ಕಿಚ್ಚನ್ನು ಇನ್ನಷ್ಟು ಹೆಚ್ಚಿಸಿದೆ. ಇನ್ನೂ ಹೆಚ್ಚಿನನಾಡು, ನುಡಿಯ ಸೇವೆಗೆ ದೊರಕಿದ ಅವಕಾಶ ಎಂದು ಇದನ್ನು ಪರಿಗಣಿಸಿ ಕನ್ನಡ ತಾಯಿಯ ಸೇವೆಗೆ ಸಮರ್ಪಿಸಿಕೊಳ್ಳುವೆ.
-ಕೆ.ರಾಜ್‌ಕುಮಾರ್, ಕೋಲಾರ
ಚಿತ್ರ ೧೪ ಕೆ.ಎಲ್.ಆರ್. ೦೧ ಸ.ರಘುನಾಥ ರವರ ಭವಚಿತ್ರ.
ಚಿತ್ರ ೧೪ ಕೆ.ಎಲ್.ಆರ್. ೦೧ಅ ಕೆ.ರಾಜಕುಮಾರ್ ರವರ ಭಾವಚಿತ್ರ.