ಕಂಪಲಾಪುರ: ಹರಿಭಕ್ತರಾಗಿದ್ದ ಕನಕದಾಸರು ಕೇವಲ ಒಂದೇ ಜಾತಿಗೆ ಸೀಮಿತವಾದವರಲ್ಲ. ಬದಲಾಗಿ ಅವರು ಸರ್ವ ಜನಾಂಗದ ಮಹಾನ್ ನಾಯಕರಾಗಿದ್ದರು ಎಂದು ಪ್ರೌಢಶಾಲೆಯ ಶಿಕ್ಷಕ ಎಚ್.ಎಂ.ಶಿವರಾಜ್ ಅಭಿಪ್ರಾಯಪಟ್ಟರು.
ಇಲ್ಲಿನ ವಿನಾಯಕ ಸರ್ಕಲ್‌ನಲ್ಲಿ ಸೋಮವಾರ ಅಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಮನುಷ್ಯನಲ್ಲಿ ನಾನು ಎಂಬ ಅಹಂಕಾರ, ಜಾತೀಯತೆ ತೊಲಗಬೇಕು ಎಂಬ ಉದ್ದೇಶದಿಂದ ಭಕ್ತಿಯ ಕೀರ್ತನೆಗಳನ್ನು ಕನಕದಾಸರು ಹಾಡಿದರು. ತಿರುಪತಿ ತಿಮ್ಮಪ್ಪ, ಉಡುಪಿ ಕೃಷ್ಣನ ಪರಮ ಭಕ್ತರಾಗಿದ್ದರು. ಜತೆಗೆ ಸಾಹಿತಿಯಾಗಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಒಮ್ಮೆ ಯುದ್ಧದಲ್ಲಿ ಸೋತಾಗ ವೈರಾಗ್ಯರಾಗಿ, ತಂಬೂರಿ ಹಿಡಿದು ಭಕ್ತಿ ಕೀರ್ತನೆಗಳನ್ನು ಬೀದಿಯಲ್ಲಿ ಹಾಡಿ ಎಲ್ಲರ ಮನಸೂರೆಗೊಂಡಿದ್ದರು ಎಂದರು.
ನಿವೃತ್ತ ಮುಖ್ಯ ಶಿಕ್ಷಕ ನಾಗಪ್ಪ ಮಾತನಾಡಿ, ಸಮಾಜದಲ್ಲಿ ಐಕ್ಯತೆ, ಸಮನ್ವಯತೆ ಮೂಲಕ ಎಲ್ಲರಲ್ಲೂ ಸಹಬಾಳ್ವೆಯನ್ನು ಕಾಣುವಂತೆ ಮಾಡಿದ ಮಹಾನ್ ಸಂತ ಕನಕದಾಸರು. ಇಂತಹವರ ತತ್ವ, ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.
ಗಣ್ಯರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಂ.ರಮೇಶ್, ಪಂಪ್‌ಸೆಟ್ ಮಹದೇವ್, ಕೆ.ಪಿ.ನಿಂಗರಾಜು, ಸ್ವಾಮಿಗೌಡ, ತಮ್ಮಯ್ಯ, ಗ್ರಾಪಂ.ಅಧ್ಯಕ್ಷೆ ಜಾನಕಿ, ಸದಸ್ಯರಾದ ರಾಮಲಿಂಗ, ಶ್ರೀಪತಿ, ಮಂಜು , ರಾಣಿ, ಶೀಲಾ, ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ಲಕ್ಷ್ಮಣ್, ಗಿರೀಶ್, ಗೋಪಾಲ್, ಕೆ.ಕುಮಾರ್, ರಾಜೇಗೌಡ, ಕೆ.ಆರ್.ಗುರುಸಿದ್ದಪ್ಪ, ಅನಿಲ್, ಶ್ರೀನಿವಾಸ್, ಮಹೇಶ್, ತಮ್ಮಯ್ಯ , ಚಂದ್ರು , ಸುನಿಲ್, ಗುರುಸಿದ್ಪಪ್ಪ, ಪರಮೇಶ್ , ಕನಕ ಯುವ ಸೇನೆಯ ಎಲ್ಲ ಪದಾಧಿಕಾರಿಗಳು ಗ್ರಾಮಸ್ಥರು ಹಾಜರಿದ್ದರು.
ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ಸಂಜೆ ಕನಕದಾಸರ ಬೃಹತ್ ಭಾವಚಿತ್ರವನ್ನು ಟ್ರ್ಯಾಕ್ಟರ್‌ನಲ್ಲಿ ಇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.