ಮೊದಲಿನಿಂದಲೂ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಕದಂಬ ಅವರು ಯುವಸಮೂಹವನ್ನು ಪ್ರಭಾವಿಸಿದ್ದಾರೆ ಎಂದು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ತಿಳಿಸಿದರು.
ನಗರದ ರೋಟರಿ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಿರಿಯ ರಂಗಕರ್ಮಿ ಡಾ.ರಾಜಶೇಖರ ಕದಂಬ ಕುರಿತಾದ ಡಾ.ಮಾನಸ ಸಂಪಾದಕತ್ವದ ರಂಗಾಭರಣ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಕದಂಬ ಅವರಿಗೆ ವಿನಯವೇ ಆಭರಣ. ಯಾವುದೇ ಹಮ್ಮುಬಿಮ್ಮು ಇಲ್ಲ ಎಲ್ಲರೊಂದಿಗೆ ಬೆರೆಯುತ್ತರೆ. ರಂಗಭೂಮಿ ಸಾಕ್ಷಿಪ್ರಜ್ಞೆಯಂತೆ ಕ್ರಿಯಾಶೀಲರಾಗಿ ಈ ಇಳಿವಯಸ್ಸಿನಲ್ಲೂ ಕೆಲಸ ಮಾಡುತ್ತಿದ್ದಾರೆ ಎಂದರು.
ಕದಂಬ ಅವರ ಹೆಸರನ್ನು ನಾನು ಬಾಲ್ಯದಿಂದಲೂ ಕೇಳಿದ್ದೇನೆ. ರಾಮೇಶ್ವರಿ ವರ್ಮ, ನಾ ರತ್ನ ಹಾಗೂ ರಾಜಶೇಖರ ಕದಂಬ ಅವರು ಮೈಸೂರಿನ ಸಾಕ್ಷಿ ಪ್ರಜ್ಞೆಯಾಗಿದ್ದಾರೆ. ಪ್ರಸ್ತುತ ಕದಂಬ ಅವರು ತಮ್ಮ ಇಳಿವಯಸ್ಸಿನಲ್ಲಿ ಕ್ರಿಯಾಶೀಲರಾಗಿದ್ಸಾರೆ. ರಂಗಭೂಮಿ ದಾಖಲೀಕರಣಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ಹಾಗೂ ನಾಟಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ, ಎಂದು ಶ್ಲಾಘಿಸಿದರು.
ಕೃತಿಯನ್ನು ಕುರಿತು ನಿವೃತ್ತ ಪ್ರಾಧ್ಯಾಪಕ ಡಾ.ಸಿ.ನಾಗಣ್ಣ ಮಾತನಾಡಿ, ಕದಂಬ ಅವರನ್ನು ಹವ್ಯಾಸಿ ರಂಗಭೂಮಿ ಭೀಷ್ಮ ಎಂದೇ ಕರೆಯಬಹುದು. ಕದಂಬ ಅವರು ಎಲ್ಲರೊಂದಿಗೆ ಬೆರೆಯುವ ಸ್ವಭಾವ ಹೊಂದಿದ್ದಾರೆ. ಈ ಕಿರುಹೊತ್ತಿಗೆಯಲ್ಲಿ ಡಾ.ರಾಜಕುಮಾರ್, ಕುವೆಂಪು, ದೇಜಗೌ ಅವರ ಅಭಿಪ್ರಾಯಗಳನ್ನು ದಾಖಲಿಸಲಾಗಿದೆ. ಸಿನಿಮಾರಂಗದಲ್ಲೇ ಕದಂಬ ಅವರು ಪೂರ್ಣಪ್ರಮಾಣದಲ್ಲಿ ಇರಬಹುದಿತ್ತು. ಆದರೆ, ರಂಗಭೂಮಿ ಮೇಲಿನ ಪ್ರೀತಿಯಿಂದ ಅವರು ಇಲ್ಲಿಯೇ ಉಳಿದರು, ಎಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ, ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಅಧ್ಯಕ್ಷ ರಾಜೇಶ್ ತಲಕಾಡು, ಹಿರಿಯ ರಂಗಕರ್ಮಿ ಡಾ.ರಾಜಶೇಖರ ಕದಂಬ, ಕನ್ನಡ ಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಎಂ.ಚಂದ್ರಶೇಖರ, ಡಾ.ವೈ.ಡಿ.ರಾಜಣ್ಣ ಸೇರಿದಂತೆ ಇತರರು ಹಾಜರಿದ್ದರು.