ಹೊಸದಾಗಿ ಕಥೆಯನ್ನು ಬರೆಯುವವರು ಪಾತ್ರಗಳ ಸಾರವನ್ನು ಗಟ್ಟಿಗೊಳಿಸುವತ್ತ ಗಮನ ನೀಡುವುದು ಅಗತ್ಯ ಎಂದು ಸಂಸ್ಕೃತಿ ಚಿಂತಕ ಮಹೇಶ್ ಹರವೆ ಅವರು ಅಭಿಪ್ರಾಯಪಟ್ಟರು.
ನಗರದ ಹಾರ್ಡ್ವೀಕ್ ಶಾಲಾ ಆವರಣದಲ್ಲಿ ಇರವ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪ್ರಕಾಶ್ ಪುಟ್ಟಪ್ಪ ಅವರ ಕಥಾ ಸಂಕಲನ ‘ಗಾಂೀ ಜೋಡಿನ ಮಳಿಗೆ’ ಕುರಿತು ಅವರು ಮಾತಾನಾಡಿದರು.
ಖಾತ್ಯ ಕಾದಂಬರಿಕಾರ- ಕಥೆಗಾರ ಮಾರ್ಕೋವಿಜ್ ಒಂದೇ ಸಲ ಅವರವತ್ತಕ್ಕೂ ಹೆಚ್ಚು ಕಥೆಗಳನ್ನು ಬರೆದುಬಿಡುತ್ತಿದ್ದ. ಬಳಿಕ ಅವುಗಳನ್ನು ಮತ್ತೆ ಪರಾಮರ್ಶಿಸಿ ಎಲ್ಲಿ ಪಾತ್ರಗಳು ಪುನರಾವರ್ತನೆಯಾಗಿದೆ ಎನ್ನುವುದನ್ನು ಗಮನಿಸಿ,ಅವುಗಳನ್ನು ಮತ್ತೆ ಮೂವತ್ತು ಕಥೆಗಳಿಗೆ ಇಳಿಸುತ್ತಿದ್ದ. ಮೂವತ್ತು ಹದಿನೈದು ಆಗುತ್ತಿದ್ದವು. ಅಂತಿಮವಾಗಿ ಐದು ಅಥವಾ ಆರು ಕಥೆಗಳಾಗಿ ಹೊರ ಬರುತ್ತಿದ್ದವು. ಇದರಿಂದಾಗಿ ಆತನ ಕಥೆ-ಕಾದಂಬರಿಯಲ್ಲಿ ಬಹಳ ಗಟ್ಟಿತನವಿತ್ತು. ಸಾರವಿತ್ತು. ಪಾತ್ರಗಳು ಅನಿರ್ಭವಿಕೃತಗೊಂಡಿರುತ್ತಿದ್ದವು. ಆದ್ದರಿಂದ ಕಥೆ ಬರೆಯುವ ಹೊಸ ಲೇಖಕರು-ಬರಹಗಾರರು ಪಾತ್ರಗಳ ಪೋಷಣೆ ಕುರಿತು ಆಲೋಚನೆ ಮಾಡಿ, ಅವುಗಳನ್ನು ಗಟ್ಟಿಗೊಳಿಸಬೇಕು.ಆಗ ಪಾತ್ರಗಳ ಕಸುವು ಹೆಚ್ಚಾಗುತ್ತದೆ ಎಂದರು.
ಕಥೆಗಾರರು ಪಾತ್ರಗಳ ಮೂಲಕ ತಮ್ಮ ಚಿಂತನ-ತತ್ವಗಳನ್ನು ಅರುಹಬೇಕು. ಪೂರ್ಣಚಂದ್ರ ತೇಜಸ್ವಿ ಅವರ ಅಬಚೂರಿನ ಪೋಸ್ಟ್ ಆಫೀಸ್ ಕಥೆಯು ಹೊಸ ರೀತಿಯ ಬರವಣಿಗೆಯನ್ನು ಹೊಂದಿತ್ತು. ಅದರಲ್ಲಿ ಗಾಂೀಜಿ, ಕುವೆಂಪು, ಲೋಹಿಯಾ ಅವರ ಚಿಂತನೆಗಳು ಅಡಕವಾಗಿದ್ದವು. ಕುವೆಂಪು ಅವರು ಸಾಹಿತ್ಯದಲ್ಲಿ ತಾವು ಸೃಷ್ಟಿದ ಪಾತ್ರಗಳ ಮೂಲಕ ಹಲವು ವಿಚಾರಗಳನ್ನು ಪ್ರಸ್ತುತಪಡಿಸಿದ್ದಾರೆ. ಅದರಂತೆ ನವ್ಯ ಕಥೆಗಾರರು ತಮ್ಮ ಸುತ್ತಲಿನ ಪರಿಸರದ ವಿಚಾರಗಳನ್ನು ತಿಳಿಸಬೇಕು ಎಂದರು.
ನಮ್ಮ ಸಮಾಜವು ಎಷ್ಟೇ ಆಧುನಿಕತೆಯನ್ನು ಹೊಂದಿದ್ದರೂ,ಎಲ್ಲ ಹೊಸತನವನ್ನು ಚಲನೆಶೀಲತೆಯಿಂದ ಸ್ವೀಕರಿಸಿದರೂ ಜಾತಿ ವಿಚಾರಗಳು ಬಂದಾಗ ನಿಂತು ಬಿಡುತ್ತದೆ. ಇಂತಹ ಆಯಾಮಗಳು ಪ್ರಕಾಶ ಪುಟ್ಟಪ್ಪ ಅವರ ಕಥಾ ಸಂಕಲನದಲ್ಲಿ ಕಾಣ ಸಿಗುತ್ತದೆ. ತಮಿಳು ಮತ್ತು ಕನ್ನಡ ಎರಡು ಭಾಷೆಯನ್ನು ಬೆರಸಿಕೊಂಡು ಮಾತನಾಡುವ ಸೋಲಿಗರು, ಪೊನ್ನಾಚಿ ಭಾಗದ ಗಣಿಗಾರಿಕೆ ಮುಂತಾದ ವಿಚಾರಗಳು ಗಮನಸೆಳೆಯುತ್ತವೆ ಎಂದರು.
ಕಥೆಗಾರ ಪ್ರಕಾಶ ಪುಟ್ಟಪ್ಪ, ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯ ರಾಜೇಶ್ ಮತ್ತಿತರರು ಹಾಜರಿದ್ದರು.