ಎಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವಿಜಯವಾಣಿ ಪತ್ರಿಕೆ ವತಿಯಿಂದ ಹಮ್ಮಿಕೊಂಡಿದ್ದ ನಾರಿ ನಿನಗೊಂದು ಸ್ಯಾರಿ ಲಕ್ಕಿ ಡಿಪ್ ಡ್ರಾ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಯಿತು. ಡಾ.ಪೂರ್ಣಿಮಾ, ಆಶಾ, ಸತ್ಯನಾರಾಯಣ, ವೆಂಕಟಸುಬ್ಬನಾಯಕ, ಪ್ರೇಮಾ ಸರೋಜಿನಿ, ದೀಪಕ್ ಇತರರಿದ್ದರು.  
ನ್ಯೂಸ್

ಕಡಿಮೆ ವಯಸ್ಸಿಗೆ ವಿವಾಹ ಆಗುವವರ ಸಂಖ್ಯೆ ಹೆಚ್ಚಳ

ಎಚ್.ಡಿ.ಕೋಟೆ: ಬಾಲ್ಯವಿವಾಹಗಳು ಕಾನೂನು ವ್ಯಾಪ್ತಿಯಲ್ಲಿ ನಿಂತಿದ್ದರೂ ಕಡಿಮೆ ವಯಸ್ಸಿಗೆ ಮದುವೆ ಆಗುವವರ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದೆ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಪ್ರಸೂತಿ ತಜ್ಞೆ ಡಾ.ಪೂರ್ಣಿಮಾ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ವಿಜಯವಾಣಿ ಪತ್ರಿಕೆ ವತಿಯಿಂದ ಹಮ್ಮಿಕೊಂಡಿದ್ದ ನಾರಿ ನಿನಗೊಂದು ಸ್ಯಾರಿ ಲಕ್ಕಿ ಡಿಪ್ ಡ್ರಾ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡಿ ಮಾತನಾಡಿದರು.

ಆಸ್ಪತ್ರೆಗೆ ಬರುವ ಬಹುತೇಕ ಗರ್ಭಿಣಿಯರಲ್ಲಿ 18 ವರ್ಷದ ಒಳಗಿನವರಾಗುತ್ತಾರೆ. ಕಡಿಮೆ ವಯಸ್ಸಿನಲ್ಲಿ ಗರ್ಭಿಣಿ ಆದವರಿಗೆ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಕಾಡುತ್ತವೆ. ಇವರಲ್ಲಿ ಮಗುವಿನ ಬೆಳವಣಿಗೆ ಆಗದೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿನಿಯರಾದ ನೀವು ಶಿಕ್ಷಣದ ಮಹತ್ವ ಅರಿತು ಪದವಿ ಪಡೆಯುವ ನಿಟ್ಟಿನಲ್ಲಿ ಮುಂದಾಗಬೇಕು ಎಂದರು.

ಪ್ರೌಢಶಾಲಾ ಹಂತದಲ್ಲಿ ಓದುವ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿರುತ್ತದೆ. ಆದರೆ ಪದವಿ ಪೂರ್ವ ಹಾಗೂ ಪದವಿ ಹಂತದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆ ಇರುತ್ತದೆ. ಹಾಗಾಗಿ ಪಾಲಕರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಬೇಕು. ಹೆಣ್ಣು ಮಕ್ಕಳು ಅವರ ಸ್ವಂತ ಕಾಲಿನ ಮೇಲೆ ನಿಂತುಕೊಳ್ಳುವವರೆಗೂ ಓದನ್ನು ಮುಂದುವರಿಸಬೇಕು ಎಂದು ಕಿವಿಮಾತು ಹೇಳಿದರು.

ವಕೀಲೆ ಸರಸ್ವತಿ ಮಾತನಾಡಿ, ಹೆಣ್ಣು ಮಕ್ಕಳು ಮಾಡಿಕೊಳ್ಳುವ ಅಲಂಕಾರ ನೋಡುವವರಿಗೆ ಗೌರವ ಭಾವನೆ ಮೂಡುವಂತೆ ಇರಬೇಕು. ಆದರೆ ನಗರ ಪ್ರದೇಶಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ಧರಿಸುವ ಉಡುಪುಗಳು ಅಗೌರವದಿಂದ ಕಾಣುತ್ತಿದೆ. ನಾವು ಧರಿಸುವ ಬಟ್ಟೆ ಆಭರಣ ನಮ್ಮ ಗೌರವವನ್ನು ಹೆಚ್ಚಿಸುವುದಿಲ್ಲ. ಬದಲಾಗಿ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡಾಗ ಮಾತ್ರ ಮಹಿಳೆಯರಿಗೆ ಗೌರವ ಸಿಗಲು ಸಾಧ್ಯ. ಹಾಗಾಗಿ ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡಬೇಕು ಎಂದರು.

ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳನ್ನು ಓದುವುದರ ಜೊತೆಗೆ ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳಸಿಕೊಳ್ಳಬೇಕು. ಆ ಮೂಲಕ ಜ್ಞಾನ ದಾಹವನ್ನು ಹೆಚ್ಚಿಸಿಕೊಂಡು ಸಮಾಜದಲ್ಲಿ ನಡೆಯುವ ಸಂಗತಿಗಳನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ವಿಜಯವಾಣಿ ಪತ್ರಿಕೆಯಲ್ಲಿ ಓದುಗರಿಗೆ ಪತ್ರಿಕೆಯಲ್ಲಿ ಲೇಖನ ಮತ್ತು ಅಂಕಣ ಸೇರಿದಂತೆ ಪ್ರಸ್ತುತ ಸಮಾಜದಲ್ಲಿ ನಡೆಯುವ ಸನ್ನಿವೇಶಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಇದರಲ್ಲಿ ತಾಲೂಕಿನಿಂದ ಐದು ಜನರನ್ನು ಆಯ್ಕೆ ಮಾಡಲಾಯಿತು. ಅವರಿಗೆ ಸುಮಂಗಲಿ ಸಿಲ್ಕ್ ವತಿಯಿಂದ ಬೆಲೆ ಬಾಳುವ ಸೀರೆಗಳನ್ನು ವಿತರಿಸಲಾಯಿತು.

ಲಕ್ಕಿ ಡಿಪ್‌ನಲ್ಲಿ ಆಯ್ಕೆಯಾದವರು ಪಟ್ಟಣದ ಬಿ.ನಳಿನಾ, ಸುಲೋಚನಾ, ಜಿ.ಬಿ.ಭಾಗ್ಯಲಕ್ಷ್ಮೀ, ವಿ.ಲೇಪಾಕ್ಷಿ, ಲಕ್ಷ್ಮೀ, ತಾಲೂಕಿನ ನೂರಲಕುಪ್ಪೆ ಗ್ರಾಮದ ಎನ್.ಜಿ ಸವಿತಾ ಕುಮಾರಿ. ಕಾರ್ಯಕ್ರಮದಲ್ಲಿ ಮಹಿಳಾ ಮಕ್ಕಳ ಕಲ್ಯಾಣಾಧಿಕಾರಿ ಆಶಾ, ಪ್ರಾಂಶುಪಾಲ ವೆಂಕಟಸುಬ್ಬನಾಯಕ, ಪ್ರೇಮಾ ಸರೋಜಿನಿ, ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸ್ಥಾನಿಕ ಸಂಪಾದಕ ಸತ್ಯನಾರಾಯಣ್, ದೀಪಕ್ ಇದ್ದರು.