ಸರಗೂರು: ತಾಲೂಕಿನ ಬಿ.ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ರೈತ ಮುಖಂಡರು ಸೋಮವಾರ ಕಾಡಬೇಗೂರು ವೃತ್ತದಲ್ಲಿ ಸಭೆ ನಡೆಸಿ, ವನ್ಯಜೀವಿಗಳ ಹಾವಳಿಯಿಂದ ಬೆಳೆ ನಷ್ಟ, ವನ್ಯಜೀವಿ-ಮಾನವ ಸಂಘರ್ಷ ಕುರಿತು ಚರ್ಚಿಸಿದರು.
ಆಲನಹಳ್ಳಿ, ಆಲನಹಳ್ಳಿ ಹಾಡಿ, ಕುರ್ಣೇಗಾಲ, ಕೂಡಗಿ, ಕೂಡಗಿ ಹಾಡಿ, ಕಾಡಬೇಗೂರು, ಲಂಬಾಣಿಗರ ಕಾಲನಿ, ಹೊಸಕೋಟೆ ಸರ್ಕಲ್, ಹೊಸಕೋಟೆ, ಕಂದಲಿಕೆ ಗ್ರಾಮಗಳ ನೂರಾರು ರೈತ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ವನ್ಯಪ್ರಾಣಿಗಳ ಹಾವಳಿ ತಡೆಗೆ ಆಗ್ರಹಿಸಿದರು.
ಗ್ರಾಪಂ ಸದಸ್ಯ ಕುರ್ಣೇಗಾಲ ಬೆಟ್ಟಸ್ವಾಮಿ ಮಾತನಾಡಿ, ರೈತರ ಜಮೀನಿಗೆ ವನ್ಯಪ್ರಾಣಿಗಳು ದಾಳಿ ನಡೆಸಿ ಬೆಳೆಗಳನ್ನು ತಿಂದು, ತುಳಿದು ನಾಶ ಮಾಡುತ್ತಿವೆ. ಪ್ರಾಣಿಗಳ ಹಾವಳಿ ತಡೆಗೆ ರೈಲುಕಂಬಿ ಬ್ಯಾರಿಕೇಡ್ ಅಳವಡಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕ ಅನಿಲ್ ಚಿಕ್ಕಮಾದು ಅವರನ್ನು ಭೇಟಿ ಮಾಡಿ ರೈತರ ಸಮಸ್ಯೆಗಳನ್ನು ಮನವರಿಕೆ ಮಾಡಿ ಕೊಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ರೈತ ಮುಖಂಡರಾದ ದಾಸಪ್ಪ, ಜಿನ್ನಪ್ಪ, ಅಜಿತ್, ಗಣೇಶ, ಶಿವಕುಮಾರ್, ಜಯಶಂಕರ, ನಾಗೇಂದ್ರ, ಬೆಟ್ಟಸ್ವಾಮಿ, ಹೇಮಾಜಿನಾಯ್ಕ, ಪ್ರಭುಸ್ವಾಮಿ, ಬಸವಣ್ಣ, ಕೆ.ಪಿ.ಪುಟ್ಟದಾಸಯ್ಯ, ಮಹದೇವಪ್ಪ, ನಿಜಪ್ಪ, ಮಹೇಂದ್ರ, ಚಂದ್ರಪ್ಪ, ಇಂದ್ರಪ್ಪ , ಮಹಾವೀರ, ಸಿದ್ದಯ್ಯ, ಶಿವಾಜಿನಾಯ್ಕ, ಸುಂದ್ರಣ್ಣ ಮತ್ತಿತರರು ಪಾಲ್ಗೊಂಡಿದ್ದರು.