ನಂಜನಗೂಡು: ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಸೋಲಾರ್ ಆಕ್ಟೀವ್ ಫಾರ್ಮ್ ಸೈನ್ಸ್ ಲಿಮಿಟೆಡ್ ಕಾರ್ಖಾನೆಯಿಂದ ತಾಲೂಕಿನ ಚಿಕ್ಕಯ್ಯನಛತ್ರ ಹೋಬಳಿಯ ಇಮ್ಮಾವುಹುಂಡಿ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಸಿಎಸ್‌ಆರ್ ನಿಧಿಯಡಿ ಅವೈಜ್ಞಾನಿಕವಾಗಿ ಕಳಪೆ ಕಟ್ಟಡ ನಿರ್ಮಿಸಿದ್ದಾರೆ. ಇದನ್ನು ನಿರ್ಮಾಣ ಹಂತದಲ್ಲಿಯೇ ತೆರವುಗೊಳಿಸಬೇಕೆಂದು ಒತ್ತಾಯಿಸಿ ರೈತ ಸಂಘಟನೆ ಕಾರ್ಯಕರ್ತರು ಬುಧವಾರ ಕಾರ್ಖಾನೆ ಮುಂಭಾಗ ಪ್ರತಿಭಟನೆ ಮಾಡಿದರು.
ಕೆಂಪಿಸಿದ್ಧನಹುಂಡಿ ಸಮೀಪದಲ್ಲಿರುವ ಖಾಸಗಿ ಕಾರ್ಖಾನೆ ಮುಂಭಾಗ ಪ್ರತಿಭಟನಾಕಾರರು ಘೋಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ವಿದ್ಯಾಸಾಗರ್ ಮಾತನಾಡಿ, ಸರ್ಕಾರದ ನಿಯಮದಂತೆ ನೋಂದಾಯಿತ ಸಂಸ್ಥೆಗಳು ವಾರ್ಷಿಕ 5 ಕೋಟಿ ರೂ. ಲಾಭ ಗಳಿಸಿದರೆ ಸಂಸ್ಥೆಯ ಲಾಭದ ಶೇ. 2ರಷ್ಟನ್ನು ಸಾಮಾಜಿಕ ಸೇವಾ ಕಾರ್ಯಗಳಿಗೆ ವಿನಿಯೋಗಿಸಬೇಕು. ಈ ಹಿನ್ನೆಲೆಯಲ್ಲಿ ಇಮ್ಮಾವುಹುಂಡಿ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಕಾರ್ಖಾನೆ ಎರಡು ಕಟ್ಟಡಗಳನ್ನು ನಿರ್ಮಿಸುತ್ತಿದೆ. ಆದರೆ ಭದ್ರವಾಗಿ ತಳಪಾಯ ಹಾಕದೆ ಕಟ್ಟಡವನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ. ತಕ್ಷಣ ತಜ್ಞರು ಪರಿಶೀಲಿಸಿ ನಿರ್ಮಾಣ ಹಂತದ ಕಟ್ಟಡವನ್ನು ತೆರವುಗೊಳಿಸಬೇಕು. ಹೊಸದಾಗಿ ವೈಜ್ಞಾನಿಕವಾಗಿ ಕಟ್ಟಡವನ್ನು ನಿರ್ಮಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಹಿಮ್ಮಾವು ರಘು, ಶಿರಮಳ್ಳಿ ಮಂಜುನಾಥ್, ಕತ್ವಾಡಿಪುರ ಶಿವಣ್ಣ, ಭಾಗ್ಯಮ್ಮ ಮತ್ತಿತರರು ಭಾಗವಹಿಸಿದ್ದರು.