ಅರಸೀಕೆರೆ: ಕಟ್ಟಡ ಕಾರ್ಮಿಕರಿಗೆ ಇಲಾಖೆ ವತಿಯಿಂದ ದೊರೆಯುವ ಸವಲತ್ತುಗಳ ಕುರಿತು ಮನವರಿಕೆ ಮಾಡಿಕೊಡುವ ಹಿನ್ನಲೆಯಲ್ಲಿ ನಗರದ ತಾಲೂಕು ಕಚೇರಿ ಆವರಣದಲ್ಲಿ ಸೋಮವಾರ ಕಟ್ಟಡ ಕಾರ್ಮಿಕರ ತಾಲೂಕು ಒಕ್ಕೂಟದ ವತಿಯಿಂದ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.
ಶಾಸಕ ಕೆ.ಎಂ.ಶಿವಲಿಂಗೇಗೌಡ ಪಾಲ್ಗೊಂಡು ಮಾತನಾಡಿ,ದೇಶದಲ್ಲಿ ಹೇರಳವಾಗಿ ಮಾನವ ಸಂಪತ್ತು ಹೊಂದಿದ್ದರೂ ಪ್ರಗತಿ ಸಾಧ್ಯವಾಗಿಲ್ಲ.ಈ ನಿಟ್ಟಿನಲ್ಲಿ ರಾಜಕೀಯ ಮುಖಂಡರು, ಚಿಂತಕರು ಆಲೋಚಿಸಬೇಕಿದೆ.ಅಸಂಘಟಿತ ವಲಯದ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ ವೇಳೆ ಸದನದಲ್ಲಿ ಚರ್ಚಿಸಿ ಪರಿಹಾರ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ನೀವೆಲ್ಲರೂ ಸಂಘಟಿತರಾದರೆ ಇನ್ನಷ್ಟು ಸವಲತ್ತು ಪಡೆಯಲು ಸಾಧ್ಯವಿದೆ ಎಂದರು.
ನಗರಸಭೆ ಅಧ್ಯಕ್ಷ ಸಿ.ಗಿರೀಶ್ ಮಾತನಾಡಿ,ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಶ್ರಮಿಸುತ್ತಿವೆ. ಇದಕ್ಕೆ ಪೂರಕ ಎನ್ನುವಂತೆ ಗುರುತಿನ ಚೀಟಿ ಹೊಂದಿಎಉವ ಕಟ್ಟಡ ಕಾರ್ಮಿಕರಿಗೆ ಬಸ್‌ಪಾಸ್, ಆರೋಗ್ಯ ವಿಮೆ, ವಿವಾಹ ಪ್ರೋತ್ಸಾಹಧನ, ಕೆಲಸದ ವೇಳೆ ಸಾವು ಸಂಭವಿಸಿದರೆ ಪರಿಹಾರ, ಮಾಸಿಕ ಪಿಂಚಿಣಿ ವ್ಯವಸ್ಥೆ ಸೇರಿ ಹಲವು ಕೊಡುಗೆಗಳನ್ನು ಬಿಜೆಪಿ ಸರ್ಕಾರ ನೀಡುತ್ತಿದೆ.ಇದೂವರೆಗೂ ಗುರುತಿನ ಚೀಟಿ ಪಡೆಯಲು ಸಾಧ್ಯವಾಗದೇ ಇರುವವರು ತಕ್ಷಣವೇ ಮುಖಂಡ ಎನ್.ಆರ್.ಸಂತೋಷ್ ಕಚೇರಿಗೆ ಭೇಟಿ ನೀಡಿದಲ್ಲಿ ತುರ್ತಾಗಿ ಗುರುತಿನ ಚೀಟಿ ಮಾಡಿಸಿಕೊಡಲಾಗುವುದು ಎಂದರು.
ಸಹಾಯಕ ಕಾರ್ಮಿಕ ಆಯುಕ್ತ ನಾಗರಾಜ್,ಪ್ರಭಾಕರ್, ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಜಿವಿಟಿ ಬಸವರಾಜ್,ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕಾಟೀಕೆರೆ ಪ್ರಸನ್ನಕುಮಾರ್, ರಾಮೇಗೌಡ ಹರೀಶ್, ನಾಗರಜ್, ಮಂಜುನಾಥ್, ನಗರಸಭೆ ಸದಸ್ಯ ಮನೋಹರ್, ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.