ನ್ಯೂಸ್

ಕಟ್ಟಕಡೆಯ ವ್ಯಕ್ತಿಗೂ ಸಂವಿಧಾನ ಅವಕಾಶ ನೀಡಿದೆ

ಸಂವಿಧಾನವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನ ಅವಕಾಶಗಳನ್ನು ನೀಡಿದ್ದು, ಅವರು ಮುಖ್ಯವಾಹಿನಿಗೆ ಬರಲು ಅವಕಾಶ ಮಾಡಿಕೊಟ್ಟಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ ಹೇಳಿದರು.

ಮಹಾರಾಜ ಕಾಲೇಜಿನ ಶತಮಾನತ್ಸೋವ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾರಾಜ ಕಾಲೇಜು ವತಿಯಿಂದ ಶುಕ್ರವಾರ ಆಯೋಜಿಸಿದ್ದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂವಿಧಾನದಿಂದ ಎಲ್ಲರಿಗೂ ಎಷ್ಟು ಉಪಯೋಗ ಆಗಿದೆ ಎಂಬುದಕ್ಕೆ ಇವತ್ತು ನಾವು-ನೀವು ಸಾಕ್ಷಿಯಾಗಿದ್ದೇವೆ. ಸಂವಿಧಾನ ಕೊಟ್ಟಿರುವಂತಹ ಅವಕಾಶಗಳು ಶಿಕ್ಷಣ ಕ್ಷೇತ್ರಕ್ಕೆ, ಅಭಿವೃದ್ಧಿಗೆ, ವೈಜ್ಞಾನಿಕ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಕೂಡ ಅವಕಾಶಗಳನ್ನು ನೀಡಿದೆ ಎಂದರು.

ಯುವಕರು ಅಂಬೇಡ್ಕರ್ ಅವರಂತಹ ಮಹಾನ್ ವ್ಯಕ್ತಿಗಳ ಚರಿತ್ರೆಯ ಬಗ್ಗೆ ಓದಿ ಜ್ಞಾನ ಬೆಳೆಸಿಕೊಳ್ಳಬೇಕು. ಅವರ ಸಾಧನೆಯಿಂದ ಪ್ರೇರೇಪಿತರಾಗಿ ಮುಂದಿನ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬೇಕು ಎಂದರು.

ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಕೆ.ಸವಿತಾ ಮಾತನಾಡಿ, ಬಾಬಾ ಸಾಹೇಬರ ಬಗ್ಗೆ ಎಷ್ಟೋ ಪುಸ್ತಕಗಳು ಇದ್ದು, ಅದನ್ನು ಯುವಕರು ಹೆಚ್ಚಾಗಿ ಓದಬೇಕು. ಅವರ ದಾರಿಯಲ್ಲಿ ನಡೆಯಬೇಕು ಎಂದು ಹೇಳಿದರು.

ಪ್ರಾಧ್ಯಾಪಕ ಎಸ್.ನರೇಂದ್ರಕುಮಾರ್ ಮಾತನಾಡಿ, ಭಾರತಾದ್ಯಂತ ವರ್ಗ ಚಳವಳಿಯನ್ನು ಕ್ರಾಂತಿಕಾರಿ ಚಳವಳಿಯಾಗಿ ಪರಿವರ್ತಿಸುವಲ್ಲಿ ಅಂಬೇಡ್ಕರ್ ಯಶಸ್ವಿಯಾದರು. ಬ್ರಿಟಿಷ್ ಆಳ್ವಿಕೆಯಲ್ಲಿ, ಲಂಡನ್‌ನಲ್ಲಿ ನಡೆದ ದುಂಡುಮೇಜಿನ ಸಮ್ಮೇಳನದ ಪ್ರತಿನಿಧಿಗಳಲ್ಲಿ ಅವರು ಒಬ್ಬರಾಗಿದ್ದರು, ಅಲ್ಲಿ ಅವರು ದಲಿತ ಜನರಿಗೆ ಪ್ರತ್ಯೇಕ ಮತದಾನವನ್ನು ಒತ್ತಾಯಿಸಿದ್ದರು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಮಹಾರಾಜ ಕಾಲೇಜಿನ ಆಡಳತಾಧಿಕಾರಿ ಕೆ.ತಿಮ್ಮಯ್ಯ, ಕನ್ನಡ ವಿಭಾಗದ ಮುಖ್ಯಸ್ಥೆ ಡಿ.ವಿಜಯಲಕ್ಷ್ಮೀ ಇತರರಿದ್ದರು.