ದಾವಣಗೆರೆ : ನ್ಯಾ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು ಬದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಶಿರಾ ಉಪ ಚುನಾವಣೆ ಪ್ರಚಾರದ ವೇಳೆ ನೀಡಿರುವ ಹೇಳಿಕೆಯನ್ನು ಕರ್ನಾಟಕ ಬಂಜಾರ ರಕ್ಷಣಾ ವೇದಿಕೆ ಖಂಡಿಸಿದೆ.
ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದು ಬೇಜವಾಬ್ದಾರಿಯ ಹೇಳಿಕೆ ಎಂದರು.
ಕಟೀಲ್ ಈ ಹೇಳಿಕೆಯನ್ನು ವಾಪಸ್ ಪಡೆದು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಈ ಕುರಿತು ಚರ್ಚಿಸಲು ಚಿತ್ರದುರ್ಗದ ಬಂಜಾರ ಗುರುಪೀಠದಲ್ಲಿ ಶನಿವಾರ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಸದಾಶಿವ ಆಯೋಗದ ವರದಿಯು ಅವೈಜ್ಞಾನಿಕವಾಗಿದೆ. ನಮ್ಮ ಸಮುದಾಯದಲ್ಲಿರುವ ಬಡತನ, ವಲಸೆ ಸೇರಿದಂತೆ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ತಿಳಿದು ಅವರು ಮಾತನಾಡಬೇಕಿತ್ತು. ರಾಜಕೀಯ ಲಾಭಕ್ಕಾಗಿ ಇಂಥ ಹೇಳಿಕೆ ನೀಡುವ ಪ್ರವೃತ್ತಿ ನಿಲ್ಲಿಸಬೇಕು ಎಂದು ಹೇಳಿದರು.
ಕಟೀಲ್ ಅವರು ಬಿಜೆಪಿಯನ್ನು ಮುಗಿಸಲು ಹೊರಟಿದ್ದಾರೆಯೆ ಎಂದು ಪ್ರಶ್ನಿಸಿದ ಅವರು, ಇದೇ ಪ್ರವೃತ್ತಿ ಮುಂದುವರಿದರೆ ಸರಿಯಾದ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ವೇದಿಕೆ ಅಧ್ಯಕ್ಷ ಕೆ.ಡಿ. ನಾಯ್ಕ ಮಾತನಾಡಿದರು. ಮುಖಂಡರಾದ ಆರ್. ವೆಂಕಟೇಶ್ ನಾಯ್ಕ, ಬಸವರಾಜ್ ನಾಯ್ಕ, ಅರುಣ್ ಎನ್. ಇದ್ದರು.