ಕಲಬುರಗಿ: ಹೆಣ್ಣು ಮಕ್ಕಳು ಮನೆಯಿಂದ ಹೊರಬಾರದಂತ ಸ್ಥಿತಿಯಲ್ಲಿ ಮಹಿಳಾ ಶಾಲೆ ಆರಂಭಿಸಿದ್ದ ಪೂಜ್ಯ ದೊಡ್ಡಪ್ಪ ಅಪ್ಪ ಅವರು ನೆಟ್ಟ ಸಸಿಯನ್ನು ಸಾಗರದಂತೆ ರೂಪಿಸಿ ಕಲ್ಯಾಣ ಕರ್ನಾಟಕದ ಶಿಕ್ಷಣ ಸಾಮ್ರಾಜ್ಯವಾಗಿ ರೂಪಿಸಿದ್ದು ಡಾ.ಶರಣಬಸವಪ್ಪ ಅಪ್ಪ ಎಂದು ಬಸವಕಲ್ಯಾಣದ ಅನುಭವ ಮಂಟಪ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಬಣ್ಣಿಸಿದರು.
ನಗರದ ಬಸವರಾಜಪ್ಪ ಅಪ್ಪ ಸ್ಮರಣಾರ್ಥ ಭವನದಲ್ಲಿ ಗೋದುತಾಯಿ ದೊಡ್ಡಪ್ಪ ಅಪ್ಪ ಪದವಿ ಮಹಿಳಾ ಕಾಲೇಜಿನಿಂದ ಕಲಾವಾಣಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ವಿಶೇಷ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಲಬುರಗಿಯನ್ನು ಶರಣಬಸವೇಶ್ವರರು ಕಲ್ಯಾಣವಾಗಿಸಿದರು. ಸಾವಿರ ಕೊಡ ಅಭಿಷೇಕಕ್ಕಿಂತ ಬಿಸಿಲಲ್ಲಿ ಎರಡು ಕೊಡ ನೀರಿಡುವುದೇ ಬಸವ ದಾಸೋಹ ಕಾರ್ಯ. ಅದನ್ನು ಶರಣರು ಮಾಡಿದರು ಎಂದು ಹೇಳಿದರು.
ನಮ್ಮ ವ್ಯಕ್ತಿತ್ವ ಬೆಳೆಸಿಕೊಂಡಂತೆ ಜೀವನ ರೂಪುಗೊಳ್ಳುತ್ತದೆ. ಆದರ್ಶ, ಸದ್ಗುರು, ಸದಾಚಾರ, ಸಂಸ್ಕೃತಿ ರೂಪಿಸಿಕೊಳ್ಳಬೇಕು. ಭವಿಷ್ಯ ಕೈ ರೇಖೆಯಲ್ಲಿ ಅಲ್ಲ ವಿದ್ಯೆ, ಶ್ರಮದಲ್ಲಿ ಇರುತ್ತದೆ. ಭಗವಂತ ಅದ್ಭುತ ಶಕ್ತಿ ನೀಡಿದ್ದು, ಕೀಳು ಭಾವದಿಂದ ಹೊರಬಂದು ನಮ್ಮಲ್ಲಿ ಶಕ್ತಿ ಎಂಬುದು ಅರಿತು ಸಾಗಬೇಕು. ಅಮೂಲ್ಯ ರತ್ನವಾದ ಸಮಯದ ಸದುಪಯೋಗದೊಂದಿಗೆ ಪ್ರಯತ್ನದಿಂದ ಸಾಧಕರಾಗಬೇಕು ಎಂದು ಹೇಳಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಡಾ.ದಾಕ್ಷಾಯಿಣಿ ಅಪ್ಪ ಮಾತನಾಡಿ, ಶಿಸ್ತು, ಸಮಯ ಪಾಲನೆಯಿಂದ ಭವಿಷ್ಯದಲ್ಲಿ ದೊಡ್ಡ ಅಧಿಕಾರಿಗಳಾಗಿ ನಮ್ಮ ವಿದ್ಯಾರ್ಥಿನಿಯರು ಹೊರಹೊಮ್ಮಲಿ. ಎಲ್ಲ ಕಷ್ಟ, ದುಖಃಗಳನ್ನು ಮೆಟ್ಟಿ ಸಾಧಕರಾಗಬೇಕು. ತವರು ಮತ್ತು ಗಂಡನ ಮನೆಯನ್ನು ಬೆಳಗುವ ಶಕ್ತಿ ಹೆಣ್ಣಿಗಿದೆ ಎಂದರು.
ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ ಕಾಲೇಜಗಳ ನಿರ್ದೇಶಕಿ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ದಕ್ಷಿಣ ಕರ್ನಾಟಕದ ಮಠಗಳಂತೆ ಉತ್ತರ ಕರ್ನಾಟಕದಲ್ಲಿ ಶರಣಬಸವೇಶ್ವರ ಸಂಸ್ಥಾನ, ಭಾಲ್ಕಿ ಹಿರೇಮಠ ಸಂಸ್ಥಾನ ಅನ್ನ, ಅಕ್ಷರ, ಅರಿವಿನ ದಾಸೋಹ ಮಾಡುತ್ತಿವೆ. ದಕ್ಷಿಣದ ಮಠಗಳಿಗೆ ರಾಜಾಶ್ರಯವಿತ್ತು. ನಮ್ಮ ಮಠಗಳಿಗೆ ಏನೇನೂ ಇಲ್ಲದೆ, ಭಕ್ತಿಯ ಶಕ್ತಿಯಿಂದ ಬೆಳೆದು ಸಮಾಜಕ್ಕೆ ಕೊಡುಗೆ ನೀಡುತ್ತಿವೆ ಎಂದರು.
ಐಕ್ಯೂಎಸಿ ಸಂಯೋಜಕಿ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಪುಟ್ಟಮಣಿ ದೇವಿದಾಸ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಕಲ್ಯಾಣರಾವ ಪಾಟೀಲ್, ದೂರದರ್ಶನ ಕಲಾವಿದ ನವಲಿಂಗ ಪಾಟೀಲ್ ಮಾತನಾಡಿದರು.
ಪ್ರಾಚಾರ್ಯೆ ಜಾನಕಿ ಹೊಸೂರು, ಕಲಾವಾಣಿ ವಿದ್ಯಾರ್ಥಿ ಸಂಘದ ನಿರ್ದೇಶಕಿ ಸೀಮಾ ಪಾಟೀಲï, ಸಂತೋಷಿ ಹಿಪ್ಪರಗಿ, ಕೃಪಾಸಾಗರ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಮಹಾಲಕ್ಷ್ಮೀ, ಭಾಗ್ಯ, ಸುಸ್ಮಿತಾ ಇತರರಿದ್ದರು.