ಶೃಂಗೇರಿ: ಪಶ್ಚಿಮಘಟ್ಟಗಳ ಅರಣ್ಯಗಳಲ್ಲಿ ಅಪರೂಪವಾದ ಸಸ್ಯಗಳಿವೆ. ಹಲವು ಸಸ್ಯಗಳಲ್ಲಿ ಔಷಧೀಯ ಗುಣಗಳಿದ್ದು ಅವುಗಳನ್ನು ಗುರುತಿಸಿ ಮಹತ್ವ ತಿಳಿದುಕೊಳ್ಳಲು ವಿದ್ಯಾರ್ಥಿಗಳು ಉತ್ಸಾಹದಿಂದ ಬರುತ್ತಿರುವುದು ಸಂತಸದಾಯಕ ವಿಷಯ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಅಭಿಜಿತ್ ಹೇಳಿದರು.
ತಾಲೂಕು ಅಜಸ್ರ ಚಾರಿಟೇಬಲ್ ಟ್ರಸ್ಟ್ ಹೊಸದೇವರಹಡ್ಲುನಲ್ಲಿ ಭಾನುವಾರ ಆಯೋಜಿಸಿದ್ದ ಪಶ್ಚಿಮಘಟ್ಟಗಳ ಸಸ್ಯಗಳ ಎಲೆಗಳ ಮೇಲ್ಮೈ ಲಕ್ಷಣಗಳ ಆಧಾರದಲ್ಲಿ ಗುರುತಿಸುವ ಕಾರ್ಯಾಗಾರದಲ್ಲಿ ಮಾತನಾಡಿದರು.
ಮಲೆನಾಡಿನಲ್ಲಿ ವಿಫುಲವಾದ ಹಾಗೂ ಅಮೂಲ್ಯವಾದ ಜೌಷಧೀಯ ಗುಣಗಳನ್ನು ಹೊಂದಿರುವ ಸಸ್ಯಗಳನ್ನು ಜತನದಿಂದ ಕಾಪಾಡುವ ಹೊಣೆಗಾರಿಕೆ ಯುವಜನತೆ ಮೇಲಿದೆ. ಪ್ರಕೃತಿ ನಮಗೆ ಹೇರಳವಾದ ಸಸ್ಯಸಂಪತ್ತು ನೀಡಿದ್ದರೂ ಅದರ ಮೌಲ್ಯ ಮರೆತಿದ್ದೇವೆ. ಪಾರಂಪರಿಕ ಸಸ್ಯಗಳನ್ನು ಗುರುತಿಸುವುದು ಅತ್ಯಂತ ಸುಲಭ ಹಾಗೂ ಮನಸ್ಸಿಗೆ ಮುದ ನೀಡುವ ಕಾರ್ಯ ಎಂದರು.
ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಶ್ರೀಶೈಲ ಮಾತನಾಡಿ, ಮಲೆನಾಡಿನ ಅಮೂಲ್ಯ ಸಸ್ಯಗಳ ಮಾಹಿತಿಯನ್ನು ವಿಜ್ಞಾನಿಗಳ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸುವ ಗುರುತರ ಜವಾಬ್ದಾರಿಯನ್ನು ಟ್ರಸ್ಟ್ ಮಾಡುತ್ತಿರುವುದು ಸಂತಸದ ವಿಷಯ ಎಂದರು.
ಶನಿವಾರ ಹಾಗೂ ಭಾನುವಾರ ನಡೆದ ಕಾರ್ಯಾಗಾರದಲ್ಲಿ ಸ್ಥಳೀಯ ವಿದ್ಯಾರ್ಥಿಗಳು ಭಾಗಿಯಾದರು. ಜೆಸಿಬಿಎಂ ಕಾಲೇಜಿನ ಸಂಪನ್ಮೂಲ ವ್ಯಕ್ತಿ ಡಾ. ಕುಮಾರಸ್ವಾಮಿ ಉಡುಪ ಅವರು ವಿವಿಧ ಸಸ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕುದುರೆಮುಖ ವನ್ಯಜೀವಿ ಉಪವಲಯದ ಅರಣ್ಯಾಧಿಕಾರಿ ಮಲ್ಲಿಕಾರ್ಜುನ, ಟ್ರಸ್ಟ್ ಪದಾಧಿಕಾರಿಗಳಾದ ಕೇಶವಮೂರ್ತಿ, ಶಶಾಂಕ್, ವಿಶ್ವಜಿತ್, ಕಿರಣ್, ಡಾ. ಕೃಷ್ಣಕುಲಕರ್ಣಿ, ವಿದ್ಯಾರಣ್ಯಪುರ ಗ್ರಾಪಂ ಸದಸ್ಯ ವಿಜಯ್ ತಿಪ್ಪನಮಕ್ಕಿ ಇದ್ದರು.