ಎನ್.ಆರ್.ಪುರ: ಮಲೆಯಾಳಿ ಮಾತನಾಡುವ ರಾಜ್ಯಗಳಲ್ಲಿ ಹೆಚ್ಚಾಗಿ ಓಣಂ ಹಬ್ಬ ಆಚರಿಸುತ್ತಾರೆ. ಆದರೆ ಓಣಂ ಹಬ್ಬವು ಮಲೆಯಾಳಿ ಭಾಷಿಗರ ಹಬ್ಬವಾಗಿರದೆ ಎಲ್ಲ ಹಿಂದುಗಳ ಹಬ್ಬವಾಗಿದೆ ಎಂದು ಕೇರಳದ ಮಣ್ಣಾರ್ ಕಾಡ್‌ನ ಯುವ ಆಧ್ಯಾತ್ಮಿಕ ಪ್ರವಚನಕಾರ ಪಿ.ಎಂ.ವ್ಯಾಸನ್ ತಿಳಿಸಿದರು.
ಬಿ.ಎಚ್.ಕೈಮರದಲ್ಲಿ ಭಾನುವಾರ ಕೇರಳ ಹಿಂದು ಸಮಾಜದ 3ನೇ ವಾರ್ಷಿಕೋತ್ಸವ ಹಾಗೂ 4ನೇ ವರ್ಷದ ಓಣಂ ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ನಾನು ಹಿಂದು ಎಂದು ಅಭಿಮಾನದಿಂದ ಹೇಳಲು ಹಿಂಜರಿಯಬೇಕಾಗಿಲ್ಲ. ಹಿಂದು ಎಂಬ ಧರ್ಮ ಸಂಘಟನೆಗೆ ನಮ್ಮನ್ನು ಸೇರಿಸಿದ ಆದಿಶಂಕರಾರ್ಚಾರ ಪಾದಗಳಿಗೆ ನಮಿಸಬೇಕಾಗಿದೆ. ಈಶ್ವರ, ಬ್ರಹ್ಮ, ವಿಷ್ಣು, ದೇವಿ ಸೇರಿದಂತೆ ಎಲ್ಲ ದೇವರು ಒಂದೇ ಆಗಿದ್ದು ವಿವಿಧ ರೂಪಗಳಲ್ಲಿದ್ದಾರೆ. ಎಲ್ಲ ದೇವರ ಚೈತನ್ಯವೂ ಒಂದೇ ಆಗಿದೆ. ಎಲ್ಲರಲ್ಲೂ ಇರುವುದು ಸನಾತನ ಧರ್ಮವಾಗಿದೆ. ಹಿಂದುಗಳು ಸಂಘಟನೆಯಾಗುವ ಅಗತ್ಯವಿದೆ. ಸಂಘಟನೆಯಿಂದ ಶಕ್ತಿವಂತರಾಗಬಹುದು. ವಿದ್ಯೆಯಿಂದ ಪ್ರಬುದ್ಧರಾಗಬಹುದು ಎಂದರು.
ಶ್ರೀ ನಾರಾಯಣಗುರು ಸಮಾಜದ ತಾಲೂಕು ಅಧ್ಯಕ್ಷ ಪಿ.ಆರ್.ಸದಾಶಿವ ಮಾತನಾಡಿ, ಕೇರಳ ಹಿಂದು ಸಮಾಜವು ಜಿಲ್ಲೆಯಲ್ಲಿ ಸಂಘಟನೆಯಾಗುತ್ತಿದೆ. ನಮ್ಮ ತಾಲೂಕು ಸಂಘವು ಜಿಲ್ಲೆಗೆ ಮಾದರಿ ಸಂಘ ಆಗಬೇಕಾಗಿದೆ. ಕೇರಳ ಹಿಂದು ಸಮಾಜದವರು ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಕಲಿಸಬೇಕು. ಎಲ್ಲರನ್ನೂ ಗೌರವದಿಂದ ಕಾಣಬೇಕು ಎಂದು ತಿಳಿಸಿದರು.
ಕೇರಳ ಹಿಂದು ಸಮಾಜದ ಕಾರ್ಯದರ್ಶಿ ಕೆ.ಎನ್.ಅಶೋಕ್ ವರದಿ ವಾಚಿಸಿದರು. ಮುಖಂಡರಾದ ಶೀಗುವಾನಿ ಕೆ.ಎನ್.ಶಿವದಾಸ್, ಗಾಂದಿಗ್ರಾಮ ನಾಗರಾಜ, ಬಿ.ಎಚ್.ಕೈಮರದ ಬಿನು, ಕೆರೆಮನೆ ಜನಾರ್ದನ್, ಚಿಟ್ಟಿಕೊಡುಗೆ ಮನೋಹರ್, ಕಿಚ್ಚಬ್ಬಿ ತಂಗಪ್ಪನ್, ಸಂಚಾಲಕ ಪಿ.ಆರ್.ಅರವಿಂದ್, ಕೇರಳದ ಮುಖಂಡ ಸ್ವಾಮಿನಾಥನ್, ಸುಧಾಕರ್ ಆಚಾರಿ, ಸೌಖ್ಯ ಇದ್ದರು. ಓಣಂ ಹಬ್ಬದ ಪ್ರಯುಕ್ತ ಆಕರ್ಷಕ ಹೂವಿನ ರಂಗೋಲಿ ಹಾಕಲಾಗಿತ್ತು.