ಚಿತ್ರದುರ್ಗ: ರಾಜ್ಯದಲ್ಲಿ ಒಳ ಮೀಸಲು ಜಾರಿಗೆ ಬದ್ಧವೆಂದು ಅಧಿವೇಶನದಲ್ಲಿ ಖಾತ್ರಿಪಡಿಸದ ಕಾರಣ ಸರ್ಕಾರದ ವಿರುದ್ಧ ಆಂದೋಲನ ಅನಿವಾರ್ಯವಾಗಿದೆ ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಎಚ್ಚರಿಸಿದರು.
ನಗರದ ತರಾಸು ರಂಗಮಂದಿರದಲ್ಲಿ ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ಒಳಮೀಸಲು ಜಾರಿಗಾಗಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮಾದಿಗ ವಕೀಲರ ಮೊದಲ ಬೃಹತ್ ಸಮಾವೇಶದ ಸಾನ್ನಿಧ್ಯವಹಿಸಿ ಮಾತನಾಡಿದರು.
ಸದನದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೀಸಲಾತಿ ಕುರಿತು ದನಿ ಎತ್ತಿದರೆ, ಅದಕ್ಕೆ ದನಿಗೂಡಿಸಬೇಕಿದ್ದ ಸಮುದಾಯದ ಶಾಸಕರು ಮೌನ ವಹಿಸಿದ್ದರಿಂದ ಹೋರಾಟ ಮುಂದುವರಿಯಲಿದೆ ಎಂದರು.
ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಬಹುಜನ ಚಳವಳಿಗಾರ ಮಾರಸಂದ್ರ ಮುನಿಯಪ್ಪ, ವಕೀಲರ ವೇದಿಕೆ ಅಧ್ಯಕ್ಷ ಎಸ್.ಅರುಣ್‌ಕುಮಾರ್, ಮಂಡ್ಯದ ನಿ. ಜಿಲ್ಲಾ ನ್ಯಾಯಾಧೀಶ ಎಚ್.ಸಿ. ಶ್ಯಾಮ್‌ಪ್ರಸಾದ್, ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ, ವೇದಿಕೆ ಪ್ರಧಾನ ಕಾರ್ಯದರ್ಶಿ ಬೂದಿತಿಟ್ಟು ರಾಜೇಂದ್ರ, ವಕೀಲರಾದ ಎಸ್.ಮಾರೆಪ್ಪ, ವಿಜಯ್‌ಕುಮಾರ್, ಬೀಸ್ನಹಳ್ಳಿ ಜಯಪ್ಪ, ಟಿ.ಹನುಮಂತಪ್ಪ, ಎಂ.ದಾಸಯ್ಯ, ಶಿವಕುಮಾರ್ ಎಂ. ಬೆಳ್ತೂರು, ಮಾಳಪ್ಪ ಕುರ್ಕಿ, ಎಂ.ಆರ್. ಸುರೇಂದ್ರಕುಮಾರ್, ಕುಮಾರಪ್ಪ, ಜಿ.ಕೆ. ಮಲ್ಲಿಕಾರ್ಜುನ್, ನರಹರಿ, ಎನ್. ಚಂದ್ರಪ್ಪ, ಚಂದ್ರಸೇನಾ ಸಾಗರ್ ಸೇರಿ ರಾಜ್ಯದ ವಿವಿಧೆಡೆಯ 500ಕ್ಕೂ ಹೆಚ್ಚು ವಕೀಲರು ಪಾಲ್ಗೊಂಡಿದ್ದರು.
ತಮಟೆ ಚಳವಳಿ: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ, ಹೊಸದುರ್ಗ ಸೇರಿ ಎಲ್ಲ ತಾಲೂಕಗಳಲ್ಲಿ ಮಾದಿಗ ದಂಡೋರ ಸಮಿತಿ, ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಶನಿವಾರ ತಮಟೆ ಚಳವಳಿ ನಡೆಸಿ ಒಳ ಮೀಸಲು ಜಾರಿಗೆ ಬೆಳಗಾವಿ ಅಧಿವೇಶನದಲ್ಲಿ ದನಿ ಎತ್ತುವಂತೆ ಒತ್ತಾಯಿಸಿ ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದರು.