ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ನೀಡಬಹುದು ಎಂಬ ಸುಪ್ರೀಂಕೋರ್ಟ್ ತೀರ್ಪನ್ನು ಸದಾಶಿವ ಆಯೋಗದ ವರದಿ ಆಧರಿಸಿ ರಾಜ್ಯಸರ್ಕಾರ ಕೂಡಲೇ ಅನುಷ್ಠಾನ ಮಾಡಬೇಕು ಎಂದು ದಲಿತ ವೆಲ್ಫೇರ್ ಟ್ರಸ್ಟ್ ಗೌರವಾಧ್ಯಕ್ಷ ಟಿ.ಎಂ.ಮಹೇಶ್ ಆಗ್ರಹಿಸಿದರು.
ತೀರ್ಪು ಜಾರಿಯಲ್ಲಿ ಸರ್ಕಾರ ನೇಮಕ ಮಾಡಿರುವ ಏಕ ಸದಸ್ಯ ಆಯೋಗದ ವರದಿ ಬರಲಿ ಎಂದು ಕಾಯುವುದು ಸೂಕ್ತವಲ್ಲ. 2011ರ ಜನಗಣತಿ ವರದಿ, ಹಿಂದುಳಿದ ಆಯೋಗದ ವರದಿಗಳ ಮಾಹಿತಿಗಳನ್ನೂ ಬಳಸಿಕೊಂಡು ಜನಸಂಖ್ಯಾವಾರು ಕೂಡಲೇ ಒಳ ಮೀಸಲಾತಿ ನೀಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ವರದಿ ಬರಲಿ ಎಂದು ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ನಿಷೇಧ ಹೇರಿರುವುದು ಸರಿಯಲ್ಲ. ಇದು ನಿರುದ್ಯೋಗದ ಸಮಸ್ಯೆಯಲ್ಲಿರುವ, ವಯೋಮಿತಿ ಮೀರುತ್ತಿರುವ ಅಭ್ಯರ್ಥಿಗಳನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತದೆ. ಕೋರ್ಟ್ ತೀರ್ಪನ್ನು ಪ್ರಮುಖ ಜಾತಿಗಳಾದ ಹೊಲೆಯ ಮತ್ತು ಮಾದಿಗ ಸಮುದಾಯ ಸ್ವಾಗತಿಸಿದ್ದು, ಅನುಷ್ಠಾನ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಲೇಖಕ ಸಿದ್ದಸ್ವಾಮಿ, ಮಾದಿಗ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಶಿವಮೂರ್ತಿ, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಿಕ್ಕಂದಾನಿ ಇದ್ದರು.