ಕುವೆಂಪು ವಿವಿ ಕುಲಪತಿ ಶರತ್ ಅನಂತಮೂರ್ತಿ ಅವರಿಗೆ ಎನ್‌ಎಸ್‌ಯುಐ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಮುರುಗೇಶ್, ಟಿ.ಡಿ.ಶಶಿಕುಮಾರ್, ಕೀರ್ತಿ, ಮಾದೇಶ್, ವೇಲು ಇತರರಿದ್ದರು. 
ನ್ಯೂಸ್

ಒಬಿಸಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ

ಭದ್ರಾವತಿ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಭರ್ತಿಯಾಗದೆ ಉಳಿದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಪಿಜಿ ಸೀಟುಗಳನ್ನು ಒಬಿಸಿ ಹಾಗೂ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ನೀಡುವಂತೆ ಆಗ್ರಹಿಸಿ ಮಂಗಳವಾರ ಎನ್‌ಎಸ್‌ಯುಐ ಘಟಕದಿಂದ ಕುವೆಂಪು ವಿವಿ ಕುಲಪತಿ ಶರತ್ ಅನಂತಮೂರ್ತಿ ಹಾಗೂ ಸಿಂಡಿಕೇಟ್ ಸದಸ್ಯರಿಗೆ ಮನವಿ ಸಲ್ಲಿಸಲಾಯಿತು.

ಕುವೆಂಪು ವಿವಿಯಲ್ಲಿ 2024-25ನೇ ಸಾಲಿನ ಪಿಜಿ ಪ್ರವೇಶ ಮುಕ್ತಾಯವಾಗಿದ್ದು ಎಸ್‌ಸಿ, ಎಸ್‌ಟಿ ಹಾಗೂ ಅಂಗವಿಕಲರ ಕೋಟಾದ ಸೀಟುಗಳಿಗೆ ನಿಗದಿಪಡಿಸಿದಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆಯದೆ ಸೀಟುಗಳು ಹಾಗೆಯೆ ಉಳಿದಿವೆ. ಆದರೆ ಒಬಿಸಿ ಹಾಗೂ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಮೀಸಲಾತಿಯಲ್ಲಿ ಪ್ರವೇಶ ಸಿಗದೆ ವಂಚಿತರಾಗಿದ್ದಾರೆ. ಸೀಟು ಪಡೆಯಲು ಪರಿಶಿಷ್ಟ ಜನಾಂಗದ ವಿದ್ಯಾರ್ಥಿಗಳೇ ಇಲ್ಲದಿರುವಾಗ ಉಳಿದಿರುವ ಸೀಟುಗಳನ್ನು ಒಬಿಸಿ ಹಾಗೂ ಸಾಮಾನ್ಯವರ್ಗದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಕೌನ್ಸಿಲ್ ಸಭೆ ನಡೆಸಿ ಸೀಟು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಇತ್ತೀಚೆಗೆ ಕುವೆಂಪು ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರವೇಶ ಸಿಗದೆ ವಂಚಿತರಾಗುತ್ತಿದ್ದಾರೆ. ಇದನ್ನು ಮನಗಂಡು ದಯಮಾಡಿ ವಿವಿಯ ಎಲ್ಲ ವಿಭಾಗಗಳಲ್ಲಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಮೂಲಕ ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಎನ್‌ಎಸ್‌ಯುಐ ಗೌರವಾಧ್ಯಕ್ಷ ಮುರುಗೇಶ್, ಟಿ.ಡಿ.ಶಶಿಕುಮಾರ್, ಕೀರ್ತಿ, ಮಾದೇಶ್, ವೇಲು ಇತರರಿದ್ದರು.