ಚಿತ್ರದುರ್ಗ: ಸರ್ಕಾರ ಮಾಡಲಾಗದ ಕಾರ್ಯಗಳನ್ನು ಮಠಗಳು ಮಾಡುತ್ತಿವೆ. ಹೀಗಾಗಿ ಎರಡೂ ಬೇರೆ ಅಲ್ಲ. ಸಾಮಾಜಿಕ ಕಾರ್ಯಗಳಿಗಾಗಿ ನಿಮಗೆ ಅಗತ್ಯವಿರುವಷ್ಟು ಜಾಗ ಒತ್ತುವರಿ ಮಾಡಿಕೊಳ್ಳಿ. ಸರ್ಕಾರ ನಿಮ್ಮ ಪರವಾಗಿ ಇರಲಿದೆ. ಡಿಸಿ, ತಹಸೀಲ್ದಾರ್ ಕೂಡ ಅಡ್ಡಿ ಬರಲಾರರು ಎಂದು ಮಾಜಿ ಸಚಿವ ಎಚ್.ಆಂಜನೇಯ ಯಾದವ ಸಮುದಾಯಕ್ಕೆ ಭರವಸೆ ನೀಡಿದರು.
ಗೊಲ್ಲಗಿರಿ ಕ್ಷೇತ್ರದಲ್ಲಿ ಶನಿವಾರ ನಡೆದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಅವರ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಲಿತ ಕಾಲನಿಗಳು ಅಭಿವೃದ್ಧಿ ಹೊಂದುತ್ತಿವೆ. ಆದರೆ, ಕಾಡುಗೊಲ್ಲರ ಹಟ್ಟಿಗಳು ಸ್ವಾತಂತ್ರ್ಯ ಪೂರ್ವದಲ್ಲಿ ಹೇಗಿತ್ತೋ ಈಗಲೂ ಹಾಗೆ ಇವೆ. ನಿಮ್ಮ ಸಮುದಾಯದ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಕೂಡ ಸೆಳೆಯಲಾಗಿದೆ. ಯಾದವ ಸಮಾಜದವರಿಗೆ ರಾಜಕೀಯ ಸ್ಥಾನಮಾನ ಕಲ್ಪಿಸಲು ಕಾಂಗ್ರೆಸ್ ಬದ್ಧವಿದೆ. ಅವಕಾಶ ವಂಚಿತ ಸಮುದಾಯಗಳ ಪರವಾಗಿ ದುಡಿಯಲಿದ್ದೇನೆ ಎಂದು ಆಶ್ವಾಸನೆ ನೀಡಿದರು.