ನ್ಯೂಸ್

ಒಡಿಶಾದಲ್ಲಿ ಗಾಂಜಾ ಖರೀದಿ, ಬೆಂಗಳೂರಲ್ಲಿ ಮಾರಾಟ!

ಬೆಂಗಳೂರು: ಒಡಿಶಾದಿಂದ ರೈಲಿನಲ್ಲಿ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಮೂವರನ್ನು ಶ್ರೀರಾಂಪುರ ಪೊಲೀಸರು ಬಂಧಿಸಿದ್ದಾರೆ.

ಲಿಂಗರಾಜಪುರದ ಕಾರ್ತಿಕ್ ಅಲಿಯಾಸ್ ಕಬಾಲಿ (31), ಕೋರಮಂಗಲದ ವಿಕ್ಕಿ (23) ಮತ್ತು ಕೂಡ್ಲು ವಿನಾಯಕ ನಗರದ ಪ್ರೇಮ್‌ಕುಮಾರ್ (21) ಬಂಧಿತರು. ಆರೋಪಿಗಳಿಂದ 25 ಲಕ್ಷ ರೂ. ಮೌಲ್ಯದ 40 ಕೆ.ಜಿ. ಗಾಂಜಾ, 2 ದ್ವಿಚಕ್ರ ವಾಹನ, ಆಟೋ ರಿಕ್ಷಾ ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದರ್ ಕುಮಾರ್ ಮೀನಾ ತಿಳಿಸಿದ್ದಾರೆ.

ಆರೋಪಿ ಕಾರ್ತಿಕ್ ವರ್ಕ್ ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ವಿಕ್ಕಿ ಕೋರಮಂಗಲದ ಪಬ್‌ವೊಂದರಲ್ಲಿ ಡಿ.ಜೆ. ಪ್ಲೇಯರ್ ಆಗಿ ಹಾಗೂ ಪ್ರೇಮ್ ಕುಮಾರ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಕಾರ್ತಿಕ್ 2019ರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ರಾಜಾಜಿನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಜೈಲು ಪಾಲಾಗಿ ಜಾಮೀನು ಪಡೆದು  ಹೊರಬಂದಿದ್ದ. ನಂತರ ವಿಕ್ಕಿ ಮತ್ತು ಪ್ರೇಮ್‌ಕುಮಾರ್ ಜತೆಗೂಡಿ ದಂಧೆಯಲ್ಲಿ ತೊಡಗಿದ್ದ.

ಕಾರ್ತಿಕ್ ಒಡಿಶಾಕ್ಕೆ ತೆರಳಿ ಅಲ್ಲಿ ಗಾಂಜಾ ಖರೀದಿಸಿ ರೈಲಿನಲ್ಲಿ ಬೆಂಗಳೂರಿಗೆ ತರುತ್ತಿದ್ದ. ಸುಬ್ರಮಣ್ಯನಗರ, ಶ್ರೀರಾಂಪುರ, ರಾಜಾಜಿನಗರ, ಶೇಷಾದ್ರಿಪುರ, ಬಸವೇಶ್ವರನಗರಗಳಲ್ಲಿ ಪರಿಚಿತ ಗ್ರಾಹಕರಿಗೆ ಪೂರೈಕೆ ಮಾಡುತ್ತಿದ್ದ. ಸೆ.29ರಂದು ಸಂಜೆ 5.30ರಲ್ಲಿ ಯಶವಂತಪುರದಿಂದ ರೈಲ್ವೆ ಹಳಿ ಪಕ್ಕದ ರಸ್ತೆಯಲ್ಲಿ ಆರೋಪಿಗಳು ಆಟೋದಲ್ಲಿ ಗಾಂಜಾ ಸಾಗಿಸುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ.