ಬೆಂಗಳೂರು:ಸುದೀರ್ಘವಾಗಿ 22 ವರ್ಷ ಸಹ ಜೀವನ ನಡೆಸಿದ ನಂತರ ಪ್ರಿಯತಮನ ವಿರುದ್ಧ ಮಹಿಳೆ ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಅತ್ಯಾಚಾರ ಮತ್ತು ವಂಚನೆ ಸೇರಿ ಇನ್ನಿತರ ಆರೋಪಗಳ ಸಂಬಂಧ ತಮ್ಮ ವಿರುದ್ಧ ಮಾಜಿ ಗೆಳತಿಯು ದಾಖಲಿಸಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ನೆಲಮಂಗಲದ ನಿವಾಸಿ ಸತೀಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅರ್ಜಿದಾರರು ಮತ್ತು ದೂರುದಾರರು ಸತತ 22 ವರ್ಷಗಳ ಕಾಲ ಸಹ ಜೀವನ ನಡೆಸುತ್ತಿದ್ದರು. ಈ ರೀತಿ ಹಲವಾರು ವರ್ಷಗಳ ಕಾಲ ಒಟ್ಟಾಗಿ ಇದ್ದು, ಸಂಬಂಧ ಹದಗೆಟ್ಟ ನಂತರ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸುವುದು ಒಪ್ಪುವಂತದಲ್ಲ.
ಹೀಗಾಗಿ ಪ್ರಕರಣವನ್ನು ಮುಂದುವರೆಸಿದಲ್ಲಿ ಕಾನೂನು ಪ್ರಕ್ರಿಯೆ ದುರುಪಯೋಗ ಮಾಡಿದಂತಾಗುತ್ತದೆ ಎಂದಿರುವ ನ್ಯಾಯಪೀಠ, ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿದೆ. ಆದೇಶ ವಿಸ್ತೃತ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಪ್ರಕರಣವೇನು?
ದೂರುದಾರರ ಮಹಿಳೆ ಗಂಗಾವತಿ (36) ನಗರದ ಅಂದ್ರಹಳ್ಳಿಯ ನಿವಾಸಿ. ಆಕೆ ಮೊದಲಿಗೆ ಮಲ್ಲಯ್ಯ ಎಂಬುವವರನ್ನು ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಮಾರಣಾಂತಿಕ ರೋಗದಿಂದ ಪತಿ ಬಳಲುತ್ತಿದ್ದ ಹಿನ್ನೆಲೆಯಲ್ಲಿ 2004ರಲ್ಲಿ ಬೆಂಗಳೂರಿಗೆ ಬಂದಿದ್ದ ಗಂಗಾವತಿ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.
ಈ ವೇಳೆ ಪರಿಚಯವಾದ ಸತೀಶ್ ಜತಗೆ ಉತ್ತಮ ಸ್ನೇಹ ಬೆಳೆದಿತ್ತು. ಬಳಿಕ ಗಂಗಾವತಿಗೆ ಮದುವೆಯಾಗುವುದಾಗಿ ಭರವಸೆ ನೀಡಿ ಆತನ ಮನೆಯಲ್ಲಿ ಇರಿಸಿಕೊಂಡಿದ್ದು, ನಿರಂತರವಾಗಿ ದೈಹಿಕವಾಗಿ ಸಂಬಂಧ ಹೊಂದಿದ್ದರು. ಆತ ನೆರೆಹೊರೆಯವರಿಗೆಲ್ಲ ಅವಳನ್ನು ತನ್ನ ಹೆಂಡತಿ ಎಂದು ಪರಿಚಯಿಸುತ್ತಿದ್ದ. ಆದರೆ ಇದೀಗ ಸತೀಶ್ ತನ್ನ ಹುಟ್ಟೂರಿಗೆ ಹೋಗಿ ಹಿರಿಯರು ನಿಶ್ವಯಿಸಿದ್ದ ಹುಡುಗಿಯನ್ನು ಮದುವೆಯಾಗಲು ನಿರ್ಧರಿಸಿದ್ದರು.
ಈ ಸಂಗತಿ ತಿಳಿದ ಗಂಗಾವತಿ ತನ್ನನ್ನು ಮದುವೆಯಾಗುವಂತೆ ಸತೀಶ್‌ಗೆ ಬಲವಂತ ಮಾಡಿದ್ದರು. ಅದಕ್ಕೆ ನಿರಾಕರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದ ಆರೋಪ ಸತೀಶ್ ಮೇಲಿದೆ. ಪರಿಣಾಮ ಸತೀಶ್ ವಿರುದ್ಧ ಗಂಗಾವತಿಯು ಅತ್ಯಾಚಾರ, ವಂಚನೆ, ಜೀವ ಬೆದರಿಕೆ, ಉದ್ದೇಶಪೂರ್ವಕವಾಗಿ ಅವಮಾನ ಮಾಡಿರುವುದು ಸೇರಿ ಇನ್ನಿತರ ಆರೋಪ ಹೊರಿಸಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಬ್ಯಾಡರಹಳ್ಳಿ ಠಾಣಾ ಪೊಲೀಸರು, ಸತೀಶ್ ವಿರುದ್ಧ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ ತನ್ನ ವಿರುದ್ಧದ ಪ್ರಕರಣ ರದ್ದು ಕೋರಿ ಸತೀಶ್ ಹೈಕೋರ್ಟ್ ಮೊರೆ ಹೋಗಿದ್ದರು.
ಪರಸ್ಪರ ಸಮ್ಮತಿ ಇತ್ತು...
ಅರ್ಜಿದಾರ ಪರ ವಾದ ವಕೀಲರು ವಾದ ಮಂಡಿಸಿ, ಅರ್ಜಿದಾರರ ವಿರುದ್ಧ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದವು. ಪರಸ್ಪರ ಸಮ್ಮತಿಯಿಂದಲೇ ನಾವು ದೈಹಿಕ ಸಂಪರ್ಕ ಹೊಂದಿದ್ದೆವು. ಇದೆಲ್ಲವನ್ನು ಪರಿಗಣಿಸಿ ಪ್ರಕರಣವನ್ನು ರದ್ದುಗೊಳಿಸುವಂತೆ ಮನವಿ ಮಾಡಿದರು
8 ಲಕ್ಷ ಪಡೆದ ಆರೋಪ
ಅರ್ಜಿದಾರ ಸತೀಶ್ ತನ್ನಿಂದ ಎಂಟು ಲಕ್ಷ ಹಣವನ್ನು ಪಡೆದಿದ್ದಾನೆ. ಅದರಿಂದ ಆತ ಕಾರು-ಬೈಕ್ ಖರೀದಿ ಮಾಡಿದ್ದಾನೆ. ಆದರೆ ಇದುವರೆಗೂ ಆತ ತನ್ನ ಹಣವನ್ನು ಹಿಂದಿರಿಗಿಸಲಿಲ್ಲ ಎಂದು ಗಂಗಾವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.