ನ್ಯೂಸ್

ಒಂದೇ ದಿನದಲ್ಲಿ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿ

ಕೆ.ಆರ್.ನಗರ ತಾಲೂಕಿನ ಚಿಕ್ಕವಡ್ಡರಗುಡಿ ಗಬ್ಬಿನ ಗದ್ದೆಯಲ್ಲಿ ಮರಿಗಳೊಂದಿಗೆ ಬೋನಿನಲ್ಲಿ ಸೆರೆಯಿಡಿಯಲಾದ ಚಿರತೆಯೊಂದಿಗೆ ವಲಯ ಅರಣ್ಯಾಧಿಕಾರಿ ಎಂ.ಆರ್.ರಶ್ಮಿ, ಉಪವಲಯ ಅರಣ್ಯಾಧಿಕಾರಿ ಬಿ.ಎನ್.ಕುಮಾರ್, ಸಿಬ್ಬಂದಿ ಕೆ.ಪಿ.ಸ್ವಾಮಿ, ಗಿಡ್ಡಿರೇಗೌಡ, ಮಹದೇವ್ ಇನ್ನಿತರರು ಇದ್ದರು.

ಕೆ.ಆರ್.ನಗರ: ಕಬ್ಬಿನ ಗದ್ದೆಯಲ್ಲಿ ಸಿಕ್ಕಿದ್ದ ಚಿರತೆ ಮರಿಗಳ ತಾಯಿ ಚಿರತೆಯನ್ನು ಕೇವಲ ಒಂದೇ ದಿನದಲ್ಲಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದಾರೆ.


ನಾಲ್ಕು ದಿನಗಳ ಹಿಂದೆ ಕಾವಲ್ ಹೊಸೂರು, ಬಟಿಗನಹಳ್ಳಿ, ದೊಡ್ಡವಡ್ಡರಗುಡಿ ಗ್ರಾಮದಲ್ಲಿ ಕುರಿ, ಹಸುವನ್ನು ಚಿರತೆ ತಿಂದಿತ್ತು. ಅಲ್ಲದೆ ತಾಲೂಕಿನ ದೊಡ್ಡವಡ್ಡರಗುಡಿ ಗ್ರಾಮದಲ್ಲಿ ಪದೇ ಪದೆ ಕಾಣಿಸಿಕೊಳ್ಳುತ್ತ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು ಸೆರೆ ಹಿಡಿಯಲು ವಲಯ ಅರಣ್ಯಾಧಿಕಾರಿ ಎಂ.ಆರ್.ರಶ್ಮಿ ತಂಡ ಗುರುವಾರ ಕಾರ್ಯಾಚರಣೆ ಪ್ರಾರಂಭಿಸಿತ್ತು. ಚಿರತೆ ಜಾಡು ಹಿಡಿದು ಹೊರಟ ಅರಣ್ಯಾಧಿಕಾರಿಗಳಿಗೆ ದೊಡ್ಡವಡ್ಡರಗುಡಿ ಗ್ರಾಮದ ಡಿ.ಎಸ್.ಕುಮಾರ್ ಎಂಬುವರ ಕಬ್ಬಿನ ಗದ್ದೆಯಲ್ಲಿ ಚಿರತೆಯ ಎರಡು ಮರಿಗಳು ಪತ್ತೆಯಾಗಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಸಿಕ್ಕಿತ್ತು.


ಚಿರತೆ ಸೆರೆಗೆ ಅರಣ್ಯ ಇಲಾಖೆ ಮೇಲಧಿಕಾರಿಗಳ ಜತೆ ವಲಯ ಅರಣ್ಯಾಧಿಕಾರಿ ಎಂ.ಆರ್.ರಶ್ಮಿ ತಂಡ ಚರ್ಚಿಸಿ, ಮರಿಗಳು ಪತ್ತೆಯಾದ ಸ್ಥಳದಲ್ಲಿ ಚಿರತೆ ಸೆರೆಗೆ ಬೋನು ಇಟ್ಟು ಒಳಗೆ ಚಿರತೆ ಮರಿಗಳನ್ನು ಬಿಡಲಾಗಿತ್ತು. ಚಿರತೆಯ ಚಲನವಲನಗಳ ಪತ್ತೆಗಾಗಿ ಕಾಲರ್ ಕ್ಯಾಮರಾ ಅಳವಡಿಸಲಾಗಿತ್ತು.
ಗುರುವಾರ ರಾತ್ರಿ ತಾಯಿ ಚಿರತೆ ಮರಿಗಳನ್ನು ಹುಡುಕಿಕೊಂಡು ಬಂದ ಸಂದರ್ಭದಲ್ಲಿ ಬೋನಿಗೆ ಬಿದ್ದಿರುವುದು ಕಾಲರ್ ಕ್ಯಾಮರಾದಲ್ಲಿ ಕಾಣಿಸಿದೆ. ಶುಕ್ರವಾರ ಬೆಳಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಬೋನಿಗೆ ಬಿದ್ದ ಚಿರತೆಯನ್ನು ಮೇಲಧಿಕಾರಿಗಳ ಆದೇಶದ ಮೇರೆಗೆ ಕೂರ್ಗಳ್ಳಿಯಲ್ಲಿರುವ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಬಿಟ್ಟಿದ್ದಾರೆ.


ತಾಲೂಕಿನ ದೊಡ್ಡವಡ್ಡರಗುಡಿ ಸುತ್ತಮುತ್ತ ಹಲವು ದಿನಗಳಿಂದ ಚಿರತೆ ಕಂಡುಬಂದಿತ್ತು. ಅಲ್ಲದೆ ನಾಲ್ಕೈದು ದಿನಗಳ ಹಿಂದೆ ನಾಯಿ, ಹಸು, ಕುರಿಗಳನ್ನು ತಿಂದು ಹಾಕಿತ್ತು. ಇದರಿಂದ ಜನ ಆತಂಕಕ್ಕೊಳಗಾಗಿದ್ದರು. ಈಗ ಚಿರತೆ ಸೆರೆ ಹಿಡಿದಿದ್ದರಿಂದ ಜನರಲ್ಲಿ ಆತಂಕ ದೂರಾಗಿದೆ.
ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಬಿ.ಎನ್.ಕುಮಾರ್, ಸಿಬ್ಬಂದಿ ಕೆ.ಪಿ.ಸ್ವಾಮಿ, ಗಿಡ್ಡಿರೇಗೌಡ, ಮಹದೇವ್, ಚಿರತೆ ಕಾರ್ಯಪಡೆಯ ಸದಸ್ಯರು ಭಾಗವಹಿಸಿದ್ದರು.
.