ನ್ಯೂಸ್

ಒಂದೇ ಡೋಸ್ ಪರಿಣಾಮಕಾರಿಯಲ್ಲ: ಎರಡು ಡೋಸ್ ಪಡೆದರೆ ಹೆಚ್ಚು ಸುರಕ್ಷಿತ

ನವದೆಹಲಿ: ಒಂದೇ ಡೋಸ್ ಕೋವಿಡ್ ಲಸಿಕೆ ಹೆಚ್ಚು ರಕ್ಷಣೆ ಒದಗಿಸುವುದಿಲ್ಲ ಎಂಬುದು ಅಧ್ಯಯನ ವೊಂದರಿಂದ ತಿಳಿದು ಬಂದಿದೆ. ಒಂದು ಡೋಸ್ ವ್ಯಾಕ್ಸಿನ್ ಪಡೆದವರಲ್ಲಿ ಲಕ್ಷಣಸಹಿತ ಸೋಂಕು ಕಾಣಿಸಿದ ಪ್ರಮಾಣ ಶೇಕಡ 12.3 ಆಗಿದೆ. ಲಸಿಕೆಯನ್ನೇ ಪಡೆಯದವರಲ್ಲಿ ಈ ಪ್ರಮಾಣ ಶೇಕಡ 13.9 ಆಗಿದೆ ಎಂದು ಅಧ್ಯಯನ ದೃಢಪಡಿಸಿದೆ. ಇವೆರಡನ್ನೂ ತುಲನೆ ಮಾಡಿದರೆ ಒಂದು ಡೋಸ್​ನಿಂದ ಅಧಿಕ ಪರಿಣಾಮ ಆಗಿಲ್ಲ ಎಂಬುದು ಕಂಡುಬಂದಿದೆ. ಲಕ್ಷಣಸಹಿತ ಸೋಂಕು ಅಥವಾ ಮಧ್ಯಮ ಅಥವಾ ತೀವ್ರತರದ ಕೋವಿಡ್ ರೋಗಿಗಳಿಗೆ ಒಂದೇ ಡೋಸ್ ಲಸಿಕೆ ಹೆಚ್ಚಿನ ರಕ್ಷಣೆ ನೀಡಿಲ್ಲ ಎಂಬುದೂ ತಿಳಿದುಬಂದಿದೆ.

ದೆಹಲಿಯ ಸರ್ ಗಂಗಾರಾಂ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರಲ್ಲಿ ಈ ಅಧ್ಯಯನ ನಡೆಸಲಾಗಿದೆ. ಮಾರ್ಚ್ 1ರಿಂದ ಮೇ 31ರ ನಡುವೆ ಆಸ್ಪತ್ರೆಯ 4,276 ನೌಕರರಲ್ಲಿ ಡಾ. ರುಮಾ ಸಾತ್ವಿಕ್ ನೇತೃತ್ವದಲ್ಲಿ ಈ ಅಧ್ಯಯನ ನಡೆದಿದೆ.

ಕೋವಿಶೀಲ್ಡ್​ನ ಎರಡು ಡೋಸ್ ಪಡೆದ 2,716, ಒಂದು ಡೋಸ್ ಪಡೆದ 623 ಹಾಗೂ ಇನ್ನೂ ಯಾವುದೇ ಲಸಿಕೆ ಪಡೆಯದ 927 ಉದ್ಯೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಕೊವ್ಯಾಕ್ಸಿನ್ ಅಥವಾ ಫೈಜರ್ ಲಸಿಕೆ ಪಡೆದ ನೌಕರರನ್ನು ಅಧ್ಯಯನದಿಂದ ಹೊರಗಿಡಲಾಗಿತ್ತು. ಸ್ಕಾಟ್​ಲ್ಯಾಂಡ್​ನ ಸಾರ್ವಜನಿಕ ಆರೋಗ್ಯ ಇಲಾಖೆಯ ಅಧ್ಯಯನದ ಫಲಿತಾಂಶದಂತೆಯೇ ಈ ಫಲಿತಾಂಶವೂ ಇದೆ. ಸ್ವಲ್ಪ ಮಾತ್ರವೇ ಬದಲಾವಣೆಯಿದೆ. ‘ಯುರೋಪಿಯನ್ ಜರ್ನಲ್ ಆಫ್ ಇಂಟರ್ನಲ್ ಮೆಡಿಸಿನ್’ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದೆ.

ಮುಂದಿನ ತಿಂಗಳು ಮಕ್ಕಳ ಲಸಿಕೆ
ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೆ ಹಾಕುವ ಕರೊನಾ ಲಸಿಕೆ ಲಭ್ಯವಾಗಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)-ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್​ಐವಿ) ನಿರ್ದೇಶಕಿ ಪ್ರಿಯಾ ಅಬ್ರಹಾಂ ಬುಧವಾರ ಹೇಳಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಒಟಿಟಿ ಚಾನೆಲ್ ‘ಇಂಡಿಯಾ ಸೈನ್ಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಿಯಾ, ‘2021 ನಮಗೆ ಬಹಳ ಕಷ್ಟದ, ಅದರೆ ಫಲಪ್ರದ ವರ್ಷ’ ಎಂದು ಹೇಳಿದ್ದಾರೆ. 2-18 ವಯೋಗುಂಪಿನ ಮಕ್ಕಳ ಮೇಲೆ ಕೊವ್ಯಾಕ್ಸಿನ್ ಲಸಿಕೆಯ ಎರಡು ಮತ್ತು ಮೂರನೇ ಹಂತದ ಪರೀಕ್ಷೆ ನಡೆಯುತ್ತಿದೆ. ಐಸಿಎಂಆರ್-ಎನ್​ಐವಿ, ಕೋವಿಡ್​ಗೆ ಕಾರಣವಾದ ಸಾರ್ಸ್-ಸಿಒವಿ-2 ವೈರಸ್ ವಿಚಾರದ ಸಂಶೋಧನೆಯಲ್ಲಿ ದೇಶದ ಮುಂಚೂಣಿ ಸಂಸ್ಥೆಯಾಗಿದೆ ಎಂದು ಹೇಳಿದರು.

ಏರಿದ ದೈನಿಕ ಕೇಸ್
ಬುಧವಾರ ಭಾರತದಲ್ಲಿ 35,178 ಹೊಸ ಕರೊನಾ ಕೇಸ್​ಗಳು ದೃಢಪಟ್ಟಿವೆ. ಇದು ಮಂಗಳವಾರ ವರದಿಯಾದ 25,166 ದೈನಿಕ ಕೇಸ್​ಗಿಂತ ಶೇಕಡ 40 ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಅವಧಿಯಲ್ಲಿ 440 ಜನರು ಸೋಂಕಿಗೆ ಬಲಿಯಾಗಿದ್ದಾರೆ. ದೈನಿಕ ಕೇಸ್​ನಲ್ಲಿ ಕೇರಳದ ಪಾಲು 21,000ಕ್ಕಿಂತ ಹೆಚ್ಚಿದ್ದು ದೇಶದ ಕರೊನಾ ಸೋಂಕಿನ ಕೇಂದ್ರ ಬಿಂದುವಾಗಿ ರಾಜ್ಯ ಮುಂದುವರಿದಿದೆ. ಸಕ್ರಿಯ ಪ್ರಕರಣಗಳು 3,67,415ಕ್ಕೆ ಕುಸಿದಿದ್ದು 148 ದಿನಗಳಲ್ಲೇ ಅತಿ ಕಡಿಮೆ ಸಕ್ರಿಯ ಕೇಸ್ ಆಗಿದೆ. ಕಳೆದ 24 ಗಂಟೆಗಳಲ್ಲಿ ಸುಮಾರು 55 ಲಕ್ಷ ಡೋಸ್ ಲಸಿಕೆ ಹಾಕಲಾಗಿದ್ದು ಒಟ್ಟು ಚುಚ್ಚುಮದ್ದು ಪ್ರಮಾಣ 56.1 ಕೋಟಿ ಡೋಸ್​ಗಿಂತ ಹೆಚ್ಚಾಗಿದೆ. ಲಸಿಕೆ ಅಭಿಯಾನ ಈಗಿನ ದರದಲ್ಲೇ ಮುಂದುವರಿದರೆ ಈ ವರ್ಷಾಂತ್ಯದೊಳಗೆ ಕೇವಲ ಶೇ. 36 ವಯಸ್ಕರಿಗೆ ವ್ಯಾಕ್ಸಿನ್ ನೀಡಲು ಸಾಧ್ಯವಾಗಲಿದೆ.

ಕುಸಿದ ಆರ್ ಮೌಲ್ಯ
ಕೇರಳ ಮತ್ತು ಈಶಾನ್ಯ ಭಾರತ ಸಹಿತ ದೇಶದಾದ್ಯಂತ ಕರೊನಾ ಸಾಂಕ್ರಾಮಿಕತೆಯ ಆರ್ ಮೌಲ್ಯ (ಪ್ರಸರಣ ವೇಗ)ಒಂದಕ್ಕಿಂತ ಕಡಿಮೆಯಾಗಿದೆ. ದೇಶದಲ್ಲೇ ಅತಿ ಹೆಚ್ಚು ಸಕ್ರಿಯ ಪ್ರಕರಣಗಳಿರುವ ಕೇರಳದ ಆರ್ ಮೌಲ್ಯವು ಏಳು ತಿಂಗಳ ನಂತರ ಇದೇ ಮೊದಲ ಬಾರಿಗೆ ಒಂದಕ್ಕಿಂತ ಕಡಿಮೆಗೆ ಇಳಿದಿರುವುದು ಸಮಾಧಾನದ ಸಂಗತಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆಗಸ್ಟ್ ಮೊದಲ ವಾರದಲ್ಲಿ ಒಂದು ಆಗಿದ್ದ ಆರ್ ಮೌಲ್ಯ, ನಿಧಾನವಾಗಿ ಇಳಿಮುಖವಾಗುತ್ತಿದೆ ಎಂದು ಚೆನ್ನೈನ ಗಣಿತ ವಿಜ್ಞಾನಗಳ ಸಂಸ್ಥೆಯ ಸಂಶೋಧಕರು ಹೇಳಿದ್ದಾರೆ.