ನ್ಯೂಸ್

ಒಂದು ಕೋಟಿ ಸದಸ್ಯತ್ವದ ಗುರಿ: ಕಸಾಪ ಅಧ್ಯಕ್ಷ ನಾಡೋಜ ಡಾ ಮಹೇಶ ಜೋಶಿ ಘೋಷಣೆ

ದೇವನಹಳ್ಳಿ: ಪರಿಷತ್‌ನಲ್ಲಿ ಪ್ರಸ್ತುತ 3.40 ಲಕ್ಷ ಸದಸ್ಯರಿದ್ದು, ನಮ್ಮ ಅವಧಿಯಲ್ಲಿ ಒಂದು ಕೋಟಿ ಸದಸ್ಯತ್ವ ಮಾಡುವ ಗುರಿ ಹೊಂದಲಾಗಿದೆ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹೇಳಿದರು.

ಪಟ್ಟಣದ ನಗರೇಶ್ವರ ಕಲ್ಯಾಣ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಹಾಗೂ ಕಸಾಪ ಅಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸದಸ್ಯತ್ವ ಶುಲ್ಕವನ್ನು 250 ರೂ.ಗೆ ನಿಗದಿ ಮಾಡಲಾಗುವುದು. ವಿದ್ಯಾರ್ಥಿಗಳಿಗೆ 100 ರೂ., ಸೈನಿಕರು ಮತ್ತು ಅಂಗವಿಕಲರಿಗೆ ಉಚಿತವಾಗಿ ಸಂಘದ ಸದಸ್ಯತ್ವ ನೀಡಲಾಗುವುದು ಎಂದರು.

ಇಲ್ಲಿನ ಕೃಷ್ಣಪ್ಪ ಅವರು ಜಿಲ್ಲಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿಲ್ಲ. ಬದಲಿಗೆ ಜಿಲ್ಲೆಯಲ್ಲಿ ಕನ್ನಡಮ್ಮನ ಸೇವೆಯ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ನಾನು ಸಹ ರಾಜ್ಯದಲ್ಲಿ ಒಬ್ಬ ಕನ್ನಡಮ್ಮನ ಸೇವಕ ಎಂದರು.

ಗ್ರಾಮಾಂತರ ಜಿಲ್ಲೆಯಲ್ಲಿ ನಮ್ಮ ಅವಧಿಯಲ್ಲಿ ಇಲ್ಲಿ ಒಮ್ಮೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುವುದು ಖಚಿತ ಎಂದರು.

ಅಧಿಕಾರ ವಹಿಸಿಕೊಂಡ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ಮಾತನಾಡಿ, ನಮ್ಮಮಾತೃಭಾಷೆ ಸ್ವರ್ಗಕ್ಕಿಂತಲು ಮಿಗಿಲು. ನಮ್ಮ ಅಧ್ಯಕ್ಷರು ಪರಿಷತ್‌ನ್ನು ಜನಸಮಾನ್ಯರ ಪರಿಷತ್ ಮಾಡುವ ಬಯಕೆ ವ್ಯಕ್ತಪಡಿಸಿದ್ದು, ನಾವು ಅವರ ಜತೆ ಕೈಜೋಡಿಸಿ ಅವರ ಮಾರ್ಗದಲ್ಲಿ ನಡೆಯುತ್ತೇವೆ ಎಂದರು.

ನಿಕಟಪೂರ್ವ ತಾಲೂಕು ಕಸಾಪ ಅಧ್ಯಕ್ಷ ಆರ್.ಕೆ. ನಂಜೇಗೌಡ ಮಾತನಾಡಿ, ಕಸಾಪಗೆ ಜಿಲ್ಲೆಯಲ್ಲಿ ಹಿಂದಿನ ಹಲವು ಅಧ್ಯಕ್ಷರು ಉತ್ತಮ ಸೇವೆ ಸಲ್ಲಿಸಿ ಮುನ್ನಡಿಸಿದ್ದಾರೆ. ಕೃಷ್ಣಪ್ಪ ಅವರು ಉತ್ತಮವಾಗಿ ಕನ್ನಡ ಪತಾಕೆ ಹಾರಿಸಲಿ ಎಂದರು.

ಕನ್ನಡ ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಮಂಜುನಾಥ ಆರಾಧ್ಯ, ಪುರಸಭಾ ಅಧ್ಯಕ್ಷೆ ರೇಖಾ ವೇಣುಗೋಪಾಲ್, ಜಿಪಂ ಮಾಜಿ ಸದಸ್ಯೆ ಅನಂತಕುಮಾರಿ ಚಿನ್ನಪ್ಪ, ಕರವೇ ಕನ್ನಡಿಗರ ಸಾರಥ್ಯದ ಗೌರವಾಧ್ಯಕ್ಷ ಎನ್.ಚಂದ್ರಶೇಖರ್, ಜಿಲ್ಲಾ ಜನಜಾಗೃತಿ ಅಧ್ಯಕ್ಷ ಬಿ.ಕೆ. ನಾರಾಯಣಸ್ವಾಮಿ, ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ಬಿ.ಕೆ.ಶಿವಪ್ಪ, ಪ್ರಾಂಶುಪಾಲ ರವಿಕಿರಣ್ ಇತರರು ಇದ್ದರು.

ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಸಹಿಸುವುದಿಲ್ಲ. ನಾವು ಸಹ ಬೀದಿಗಿಳಿದು ಹೋರಡಬೇಕಾಗುತ್ತದೆ. ಮುಂದೆ ಪರಿಷತ್‌ನ್ನು ಜನಸಾಮಾನ್ಯ ಕನ್ನಡಿಗರ ಪರಿಷತ್ ಆಗಿ ಬದಲಿಸಲಾಗುವುದು. ಹಾರಾ ತುರಾಯಿಗಳನ್ನು ನಾನು ಸ್ವೀಕರಿಸುವುದಿಲ್ಲ. ಅದರ ಬದಲು ಕನ್ನಡ ಪುಸ್ತಕ ನೀಡಿ.  ನಾಡೋಜ ಡಾ. ಮಹೇಶ ಜೋಶಿ ಕಸಾಪ ಅಧ್ಯಕ್ಷ.