ನ್ಯೂಸ್

ಒಂಟಿ ಸಲಗ ದಾಳಿಯಿಂದ ಪಾರಾದ ರೈತ

ಸಲಗನ ದಾಳಿಗೆ ಜಖಂಗೊಂಡಿರುವ ಬೈಕನ್ನು ಅರಣ್ಯ ಇಲಾಖೆ ವಾಹನದಲ್ಲಿ ಸಾಗಿಸಲಾಯಿತು.

ಹನಗೋಡು: ನಾಗರಹೊಳೆ ಉದ್ಯಾನದಂಚಿನ ನಾಗಾಪುರ-2 ಬಳಿ ಇತ್ತೀಚೆಗೆ ಒಂಟಿ ಸಲಗದ ದಾಳಿಯಿಂದ ರೈತರೊಬ್ಬರು ಪಾರಾಗಿದ್ದಾರೆ. ಭಾರತವಾಡಿ ಗ್ರಾಮದ ರೈತ ಬೀರೇಗೌಡ ಆನೆ ದಾಳಿ ಪಾರಾಗಿದ್ದು, ಈತನ ಬೈಕ್ ಬೈಕ್ ಹಾನಿಯಾಗಿದೆ.


ಬುಧವಾರ ರಾತ್ರಿ 10.30ರ ಸುಮಾರಿಗೆ ಪೆಂಜಹಳ್ಳಿಯ ಶುಂಠಿ ಹೊಲಕ್ಕೆ ನೀರು ಹಾಯಿಸಿ ಊರಿಗೆ ವಾಪಸಾಗುತ್ತಿದ್ದಾಗ ನಾಗಾಪುರ-2 ಬಳಿ ಸಲಗ ಬೀರೇಗೌಡರನ್ನು ಅಟ್ಟಿಸಿಕೊಂಡು ಬಂದಿದೆ. ಕೂಡಲೇ ಎಚ್ಚೆತ್ತ ಅವರು ಬೈಕ್‌ನಿಂದ ಹಾರಿ ಹಾಡಿಯೊಳಗೆ ಓಡಿ ಹೋಗಿದ್ದಾರೆ. ಆಕ್ರೋಶಗೊಂಡ ಸಲಗ ಬೈಕನ್ನು ಸೊಂಡಲಿನಿಂದ ಎತ್ತಿ ಬಿಸಾಡಿ, ತುಳಿದು ಹಾನಿ ಮಾಡಿದೆ.


ವೀರನಹೊಸಹಳ್ಳಿ ವಲಯದ ಆರ್‌ಎಫ್‌ಒ ಗಣರಾಜ್‌ಪಟಗಾರ್‌ರಿಗೆ ಮಾಹಿತಿ ನೀಡಿದ ಮೇರೆಗೆ ಡಿಆರ್‌ಎಫ್‌ಒಗಳಾದ ಚಂದ್ರೇಶ್, ದ್ವಾರಕನಾಥ್ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಸಲಗನನ್ನು ಕಾಡಿಗಟ್ಟಿದರು. ನಜ್ಜುಗುಜ್ಜಾಗಿರುವ ಬೈಕ್ ಅರಣ್ಯ ಇಲಾಖೆ ವಶದಲ್ಲಿದೆ.


ಈ ಒಂಟಿ ಸಲಗವು ನಿತ್ಯವೂ ಉದ್ಯಾನದಂಚಿನ ರೈಲ್ವೆ ಹಳಿ ತಡೆಗೋಡೆಯನ್ನೇ ದಾಟಿ ಹೊರಬರುತ್ತಿದ್ದು, ಜನರಿಗೆ ತೊಂದರೆ ನೀಡುತ್ತಿದೆ. ಈ ಪುಂಡಾನೆಯನ್ನು ಸೆರೆ ಹಿಡಿಯುವಂತೆ ಈ ಭಾಗದ ರೈತರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.