ಐಸಿಐಸಿಐ ಬ್ಯಾಂಕ್‌ನಲ್ಲಿ ನಂಜನಗೂಡು ರೈತ ನಾಗರಾಜ್ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಟ್ರ್ಯಾಕ್ಟರ್ ಖರೀದಿ ಮಾಡಿ ಮೋಸ ಮಾಡಿದ್ದಾರೆಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಕಾಳಿದಾಸ ರಸ್ತೆಯಲ್ಲಿರುವ ಐಸಿಐಸಿಐ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಲಾಯಿತು.
ವಿವಿ ಮೊಹಲ್ಲಾದ ಐಸಿಐಸಿಐ ಬ್ಯಾಂಕ್ ಶಾಖೆಯಿಂದ ಟಿ.ನರಸೀಪುರ ತಾಲೂಕಿನ ಕೇತುಪುರ ಗ್ರಾಮದ ನಾಗರಾಜು ಹೆಸರಿನಲ್ಲಿ ನಂಜನಗೂಡಿನ ಬಸವೇಶ್ವರ ಟ್ರಾೃಕ್ಟರ್ ಶೋರೂಂನಲ್ಲಿ ಟ್ರ್ಯಾಕ್ಟರ್ ಖರೀದಿಸಲಾಗಿದೆ. ಶಾಖೆಯ ಏಜೆಂಟ್, ಸಿಬ್ಬಂದಿ ಸುಳ್ಳು ದಾಖಲೆ ಸೃಷ್ಟಿಸಿ ಅಕ್ರಮವೆಸಗಿದ್ದಾರೆ. ನಾಗರಾಜ್ ಹೆಸರಿನಲ್ಲಿ ಬೇರೊಬ್ಬ ವ್ಯಕ್ತಿಗೆ ಟ್ರ್ಯಾಕ್ಟರ್ ನೀಡಲಾಗಿದೆ. ಸಾಲ ಮಂಜೂರಾತಿ ವೇಳೆ ನಾಗರಾಜು ಶಾಖೆಗೆ ಬಂದಿಲ್ಲ. ಖುದ್ದಾಗಿ ಯಾವುದೇ ದಾಖಲೆ ನೀಡಿಲ್ಲ. ಬ್ಯಾಂಕ್ ಸಿಬ್ಬಂದಿ ಸುಳ್ಳು ದಾಖಲೆ ಸೃಷ್ಟಿಸಿ ಅಕ್ರಮವೆಸಗಿ ಮುಗ್ಧ ರೈತನ ಕುಟುಂಬವನ್ನು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ ಎಂದು ಕಿಡಿ ಕಾರಿದರು.
ಇದರಿಂದ ರೈತ ಕುಟುಂಬದಲ್ಲಿ ಕಲಹ ಉಂಟಾಗಿ ಗಂಡ-ಹೆಂಡತಿ, ಅಣ್ಣ-ತಮ್ಮಂದಿರೊಂದಿಗೆ ಮನಸ್ತಾಪ ಉಂಟಾಗಿ ಮುಗ್ಧ ರೈತ ನಾಗರಾಜು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಹೀಗಾಗಿ ಕೂಡಲೇ ಸಾಲವನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಐಸಿಐಸಿಐ ಬ್ಯಾಂಕ್ ವ್ಯವಸ್ಥಾಪಕ ಮುರುಳಿ ಆಗಮಿಸಿ ಅಹವಾಲು ಆಲಿಸಿದರು. 15 ದಿನ ಕಾಲಾವಕಾಶ ನೀಡಿ. ಇದರ ಸಂಪೂರ್ಣ ವರದಿ ಪಡೆದು ಸಮಸ್ಯೆ ಬಗೆಹರಿಸುತ್ತೇನೆಂದು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ ಸೇರಿದಂತೆ ಹಲವರು ಭಾಗವಹಿಸಿದ್ದರು.