ಕೊಳ್ಳೇಗಾಲ ಪಟ್ಟಣದಲ್ಲಿರುವ ಅಂಗಡಿಯೊಂದರಲ್ಲಿ ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದ ಮಾಲೀಕರ ವಿರುದ್ಧ ಕಾರ್ಮಿಕ ನಿರೀಕ್ಷಕ ಚಂದ್ರ ಸ್ಥಳದಲ್ಲೇ ಪ್ರಕರಣ ದಾಖಲಿಸಿದರು. 
ನ್ಯೂಸ್

ಐವರು ಬಾಲ ಕಾರ್ಮಿಕರ ರಕ್ಷಣೆ

ಕೊಳ್ಳೇಗಾಲ: ಕಾನೂನುಬಾಹಿರವಾಗಿ ಬಾಲಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಂಡು ದುಡಿಸಿಕೊಳ್ಳುತ್ತಿದ್ದ ಕೆಲ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದ್ದು ಐವರು ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.


ಪಟ್ಟಣ ಸೇರಿದಂತೆ ತಾಲೂಕಿನ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿ ಬಾಲಕಾರ್ಮಿಕರನ್ನು ಪತ್ತೆ ಹಚ್ಚಿದ್ದು ಪಟ್ಟಣದ ನಿರಂಜನ್ ಟೆಕ್ಸ್‌ಟೈಲ್ಸ್ ಪಕ್ಕದಲ್ಲಿರುವ ಕೌಶಲ್ಯಾ ಸಮೋಸಾ ಸೆಂಟರ್, ಕುಮಾರ ಎಲೆಕ್ಟ್ರಿಕಲ್ ರಸ್ತೆಯಲ್ಲಿರುವ ವಿ.ಎಂ ಹೋಂ ಅಪ್ಲೈಯನ್ಸಸ್, ನಾಯಕರ ರಸ್ತೆಯಲ್ಲಿರುವ ಲಕ್ಷ್ಮೀ ನಾರಾಯಣ ಬ್ಯಾಂಗಲ್ಸ್, ಶ್ರೀನಿಧಿ ಹೋಟೆಲ್ ಹಾಗೂ ತಾಲೂಕಿನ ಸತ್ತೇಗಾಲದ ಟಿ.ಜಿ.ದೊಡ್ಡಿಯಲ್ಲಿರುವ ಕುಮಾರ್ ಎಂಬುವರ ತೋಟದಲ್ಲಿ ಬಾಲ ಕಾರ್ಮಿಕರು ಪತ್ತೆಯಾಗಿದ್ದಾರೆ. ಕೊಳ್ಳೇಗಾಲ ವಲಯದ ಕಾರ್ಮಿಕ ನಿರೀಕ್ಷಕ ಪಿ.ಚಂದ್ರ ಬಾಲ ಕಾರ್ಮಿಕ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಸೂಕ್ತ ದಂಡ ಹಾಗೂ ಕಾನೂನು ಕ್ರಮಕ್ಕಾಗಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಪ್ರಕರಣವನ್ನು ಹಸ್ತಾಂತರಿಸಿದ್ದಾರೆ.