ಯಾದಗಿರಿ: ಶಹಾಪುರ ತಾಲೂಕಿನ ಅಣಬಿ ಗ್ರಾಮದ ಜಮೀನೊಂದರಲ್ಲಿ ಸಂಶೋಧಕ ಡಾ.ಎಂ.ಎಸ್. ಶಿರವಾಳ 2000ಕ್ಕೂ ಅಧಿಕ ವರ್ಷ ಹಿಂದಿನ ಬ್ರಾಹ್ಮಿ ಶಿಲಾಶಾಸನವನ್ನು ಪತ್ತೆ ಹಚ್ಚಿದ್ದಾರೆ.
ಗ್ರಾಮದಲ್ಲಿ ಕೈಗೊಂಡ ಕ್ಷೇತ್ರ ಕಾರ್ಯದಲ್ಲಿ ಈ ಶಾಸನ ಕಂಡು ಬಂದಿದ್ದು, 6 ಅಡಿ ಉದ್ದ, 3 ಅಡಿ ಅಗಲ ಮತ್ತು 1 ಅಡಿ ದಪ್ಪ ಗಾತ್ರದ ಸುಣ್ಣದ ಕಲ್ಲಿನ ಮೇಲೆ ಕೆತ್ತಲಾಗಿದೆ. ಪ್ರಾಕೃತ ಭಾಷೆ ಹಾಗೂ ಕ್ರಿ.ಶ. 1ನೇ ಶತಮಾನದ ಬ್ರಾಹ್ಮಿಲಿಪಿಯಲ್ಲಿದೆ. ತೇದಿ ದಾಖಲಿಸದ್ದರಿಂದ ಖಚಿತವಾಗಿ ಕಾಲ ನಿರ್ಣಯ ಸಾಧ್ಯವಿಲ್ಲ. ಇಲ್ಲಿ ಬಳಸಿರುವ ಪ್ರಾಕೃತ ಲಿಪ್ಯಕ್ಷರಗಳ ಸ್ವರೂಪ ಮತ್ತು ಗಾತ್ರಗಳ ಆಧಾರದ ಮೇಲೆ ಕ್ರಿ.ಶ. 1ನೇ ಶತಮಾನ ಆರಂಭದ ಶಾತವಾಹನರ ಕಾಲಘಟ್ಟಕ್ಕೆ ಸಂಬಂಧಿಸಿದ್ದು ಇರಬಹುದು ಎಂದು ಡಾ.ಶಿರವಾಳ ಅಭಿಪ್ರಾಯಪಟ್ಟಿದ್ದಾರೆ.
ಸುಮಾರು 2000 ವರ್ಷ ಹಿಂದಿನ ಉಭಗ ಎಂಬ ಬೌದ್ಧ ಧರ್ಮದ ಅನುಯಾಯಿ ಗೃಹಸ್ಥನೊಬ್ಬನ ಸಾವಿನ ಸ್ಮರಣೆಯಲ್ಲಿ ಹಾಕಿಸಿರುವ ಸ್ಮಾರಕ ಶಿಲಾ ಫಲಕ ಇದಾಗಿದೆ. ನಾಡಿನ ಪುರಾತನ ಸಂಸ್ಕೃತಿ, ಹೆಮ್ಮೆಯ ಪ್ರತೀಕ ಎನಿಸಿರುವ ಈ ಶಿಲಾಶಾಸನ ಹಲವು ಮಹತ್ವ ಪೂರ್ಣ ಮಾಹಿತಿ ಒಳಗೊಂಡಿದೆ. ಫಲಕದ ಮೇಲೆ ಮೂರು ಹಂತಗಳಲ್ಲಿ ಉಬ್ಬು ಚಿತ್ರಗಳನ್ನು ಕೊರೆಯಲಾಗಿದೆ ಎಂದು ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಬೌದ್ಧ ಧರ್ಮ ಪ್ರತಿಬಿಂಬಿಸುವ ಮೂರು ಚೈತ್ಯ ಶಿಲ್ಪಗಳಿವೆ. ಮಧ್ಯೆ ಗೃಹಸ್ಥನಾದ ಉಭಗನು ಉನ್ನತ ಪೀಠದ ಮೇಲೆ ವಿಲಾಸಿ ಭಂಗಿಯಲ್ಲಿ ಕುಳಿತಿದ್ದಾನೆ. ಮೂರನೇ ಹಂತದಲ್ಲಿ ನೊಗಹಾರಿದ ಚಕ್ಕಡಿ (ಬಂಡಿ) ಇದೆ. ಒಂದು ಎತ್ತು ಮಲಗಿದೆ, ಮತ್ತೊಂದು ನಿಂತಿದೆ. ಚಕ್ಕಡಿ ನಡೆಸುವಾತ ಚಿಂತಾಕ್ರಾಂತ ಭಂಗಿಯಲ್ಲಿ ಚಕ್ಕಡಿಯಲ್ಲೇ ಕುಳಿತಿದ್ದಾನೆ ಎಂದು ವಿವರಿಸಿದ್ದಾರೆ.
ಸಗರ ನಾಡಿನಲ್ಲಿ ಇಂಥ ಅನೇಕ ಮಹತ್ವಪೂರ್ಣ ಸ್ಮಾರಕಗಳು ಅವನತಿ ಅಂಚಿನಲ್ಲಿದ್ದು, ಸಂಶೋಧನೆ ಜತೆಗೆ ಸಂರಕ್ಷಣೆ ಅಗತ್ಯವಾಗಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಶಾಸನಗಳು ಕಂಡು ಬಂದರೆ ನನ್ನನ್ನು (ಮೊ.99721 57386) ಸಂಪಕರ್ಿಸುವಂತೆ ಕೋರಿದ್ದಾರೆ.
ಕ್ಷೇತ್ರ ಕಾರ್ಯದಲ್ಲಿ ಹಣಮಂತ ಕಡತಾಳ, ಎಂ.ಎಸ್. ರೋಹಿಣಿ, ಶರಣಬಸಪ್ಪ ಸಿರವಾಳ, ಎಂ.ಎಸ್. ವೆಂಕಟ ಸಾಯಿ, ಎಂ.ಎಸ್. ಶ್ರೀನಿವಾಸ, ಎಂ.ಎಸ್. ಬಾಲಾಜಿ ಎಚ್.ಎಂ. ಪತ್ತಾರ, ಹಣಮಂತ ಸೀರನೆತ್ತಿ, ಮೋದಿನ್ ಪಟೇಲ್ ಇದ್ದರು.