ನಗರದ ವಸ್ತುಪ್ರದರ್ಶನದ ಆವರಣದಲ್ಲಿ ಕೇಂದ್ರ ಸರ್ಕಾರದ ಯೋಜನೆಯಡಿ ನಿರ್ಮಾಣವಾಗುತ್ತಿರುವ ಏಕತಾ(ಯೂನಿಟಿ) ಮಾಲ್ ಕಾಮಗಾರಿ ಸ್ಥಳಕ್ಕೆ ಸೋಮವಾರ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ, ಕಾಮಗಾರಿ ಪರಿಶೀಲನೆ ನಡೆಸಿದರು. ಈ ವೇಳೆ ಕಾಮಗಾರಿ ಮಾಹಿತಿ ಪಡೆದು ಕೆಲ ಸಲಹೆ, ಸೂಚನೆಗಳನ್ನು ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಎಲ್ಲ ಭಾಗದ ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಎಲ್ಲ ರಾಜ್ಯಗಳಲ್ಲೂ ಏಕತಾ ಮಾಲ್ ನಿರ್ಮಿಸಲಾಗುತ್ತಿದೆ. ಈಗಾಗಲೇ ತಮಿಳುನಾಡು, ಗುಜರಾತಿನಲ್ಲಿ ಏಕತಾ ಮಾಲ್ ನಿರ್ಮಿಸಲಾಗಿದ್ದು, ಯಶಸ್ವಿಯಾಗಿ ನಡೆಯುತ್ತಿದೆ. ಸದ್ಯ ಮೈಸೂರಿನಲ್ಲಿ ನಿರ್ಮಿಸಲಾಗುತ್ತಿದೆ ಎಂದರು.
6.5 ಎಕರೆಯಲ್ಲಿ 193 ಕೋಟಿ ರೂ. ವೆಚ್ಚದಲ್ಲಿ ಕೆಎಸ್‌ಐಡಿಸಿ ವತಿಯಿಂದ ಅನುಷ್ಠಾನವಾಗುತ್ತಿರುವ ಏಕತಾ ಮಾಲ್‌ಗಾಗಿ ಮೈಸೂರನ್ನು ಆಯ್ಕೆ ಮಾಡಲಾಗಿದೆ. ರಾಜ್ಯದ ಒಂದೊಂದು ಜಿಲ್ಲೆಯಲ್ಲೂ ಉತ್ಪಾದನೆಯಾಗುವ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಒಳ್ಳೆಯ ಯೋಜನೆ ರೂಪಿಸಿದೆ ಎಂದು ಹೇಳಿದರು.
ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ಕೆಲಸಕ್ಕೆ ಮೈಸೂರು ಮಾದರಿಯಾಗಿದೆ. ಮೈಸೂರು ಸ್ಯಾಂಡಲ್‌ಸೋಪ್, ಮೈಸೂರು ಸಿಲ್ಕ್, ಮೈಸೂರು ಸ್ಟೀಲ್, ಸಿಮೆಂಟ್ ಸೇರಿದಂತೆ ಅನೇಕ ಉತ್ಪನ್ನಗಳಿಗೆ ಮೈಸೂರು ಬ್ರಾೃಂಡ್‌ನಲ್ಲಿ ಪ್ರೋತ್ಸಾಹ ನೀಡುತ್ತಾ ಬಂದಿತ್ತು. ಇದೇ ಮಾದರಿಯಲ್ಲಿ ಇಡೀ ಭಾರತದಲ್ಲಿ ಇರುವ ಅನೇಕ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಲು ಏಕತಾ ಮಾಲ್ ನಿರ್ಮಾಣವಾಗುತ್ತಿದೆ ಎಂದರು.
ಪ್ರವಾಸೋದ್ಯಮಕ್ಕೆ ಉತ್ತೇಜನ:
ಏಕತಾ ಮಾಲ್‌ನಿಂದ ಮೈಸೂರು ಪ್ರವಾಸೋದ್ಯಮವನ್ನು ಉತ್ತೇಜಿಸುವ ಜತೆಗೆ ಉದ್ಯೋಗಗಳೂ ಸೃಷ್ಟಿಯಾಗಲಿದೆ. ಹಸಿರು ಹೊದಿಕೆ ಕಡಿಮೆಯಾಗಬಾರದು ಹಾಗೂ ಇರುವ ಹಸಿರು ಹೊದಿಕೆಯನ್ನು ಉಳಿಸಬೇಕೆಂಬ ದೃಷ್ಟಿಯಿಂದ ಎಲ್ಲ ಕೆಲಸಗಳು ನಡೆಯುತ್ತಿದೆ. ತುಂಬಾ ಹಳೆಯದಾದ ಮರಗಳನ್ನು ಉಳಿಸುವ ಕೆಲಸಗಳು ನಡೆಯುತ್ತಿದ್ದು, ಎನ್‌ಜಿಒಗಳೊಂದಿಗೆ ಮಾತನಾಡಿ ಅಂತಹ ಮರಗಳನ್ನು ಸ್ಥಳಾಂತರಿಸಲು ಮಾಹಿತಿ ನೀಡಿದ್ದೇವೆ ಎಂದರು.
ಕುಸ್ತಿ ಅಖಾಡ ನಿರ್ಮಾಣ:
ಮೈಸೂರಿನಲ್ಲಿ ಕುಸ್ತಿಗೆ ದೊಡ್ಡ ಪರಂಪರೆ ಇದೆ. ಹೀಗಾಗಿ ಕುಸ್ತಿಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಾದರಿಯಲ್ಲಿ ಕುಸ್ತಿ ಕಾಂಪ್ಲೆಕ್ಸ್ ನಿರ್ಮಿಸಲಾಗುತ್ತಿದೆ ಎಂದು ಯದುವೀರ್ ತಿಳಿಸಿದರು.
ವಾಸ್ತುಶಿಲ್ಪಕ್ಕೆ ಮೈಸೂರು ಹೆಸರುವಾಸಿಯಾಗಿದ್ದು, ಇಂಡೋ-ಸಾರ್ಸನಿಕ್ ಮಾದರಿಗೆ ಹೊಸ ರೂಪ ನೀಡಿ ಕೆಲಸವನ್ನು ಮಾಡುತ್ತಿದ್ದಾರೆ. ಮೈಸೂರು ನಗರದ ಪಾರಂಪರಿಕ ಕಟ್ಟಡದ ಮಾದರಿಯಲ್ಲಿಯೇ ನಿರ್ಮಾಣವಾಗುತ್ತಿರುವುದು ಸಂತೋಷದ ವಿಚಾರ. ಯೋಜನೆಯು 2027ರೊಳಗೆ ಮುಗಿಯಬಹುದೆಂಬ ವಿಶ್ವಾಸವಿದೆ ಎಂದರು.
ಏಕ್ತಾ ಮಾಲ್‌ನಲ್ಲಿ 99 ಮಳಿಗೆಗಳಿದ್ದು, ಪ್ರತಿಯೊಂದು ರಾಜ್ಯಕ್ಕೂ, ಜಿಲ್ಲೆಗೂ ಪ್ರಾತಿನಿಧ್ಯ ಸಿಗುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಫುಡ್‌ಪಾರ್ಕ್ ಇರಲಿದ್ದು, ಪ್ರತಿಯೊಬ್ಬರಿಗೂ ಇಲ್ಲಿ ಅವಕಾಶ ಸಿಗಲಿದೆ. ಜಿಐ ಟ್ಯಾಗ್ ಇರುವ ವಸ್ತುಗಳು, ತಿನಿಸುಗಳು, ರಾಮ್‌ರಾಜ್ ಬಾಟ, ಸೇರಿದಂತೆ ಪ್ರಮುಖವಾದ ಮಳಿಗೆಗಳೂ ಇರಲಿವೆ. ಪ್ರವೇಶ ಉಚಿತವಾಗಿರಲಿದ್ದು, ಪಾರ್ಕಿಂಗ್‌ಗೆ ಮಾತ್ರ ಶುಲ್ಕ ಇರಲಿದೆ ಎಂದು ಹೇಳಿದರು.
ಶಾಸಕ ಟಿ.ಎಸ್.ಶ್ರೀವತ್ಸ, ಇಂಜಿನಿಯರ್‌ಗಳಾದ ಹೇಮಂತ್ ಕುಮಾರ್, ಕಲೀಂ ಸೇರಿದಂತೆ ಇತರರಿದ್ದರು.