ನ್ಯೂಸ್

ಏಕ ಪಕ್ಷೀಯ ನಿರ್ಧಾರ ಸಲ್ಲ

ಬಾಗಲಕೋಟೆ: ಹುನಗುಂದ-ಇಳಕಲ್ಲ ಅವಳಿ ನಗರದಲ್ಲಿ ರಾಜಕೀಯ ಪ್ರತಿಷ್ಠೆಗೋಸ್ಕರ ಕನಕದಾಸರ ಮೂರ್ತಿಗಳನ್ನು ಏಕ ಪಕ್ಷಿಯವಾಗಿ ಪ್ರತಿಷ್ಠಾಪನೆ ಮಾಡುತ್ತಿರುವುದು ಖಂಡನೀಯ. ಕೂಡಲೇ ಹುನಗುಂದ ಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ ಎಲ್ಲರನ್ನು ವಿಶ್ವಾಸಕ್ಕೆ ಪಡೆದುಕೊಳ್ಳಬೇಕು. ಕಾರ್ಯಕ್ರಮ ನಡೆಸಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಸೂಕ್ತ ಉತ್ತರ ಕೊಡಲಾಗುವುದು ಜಿ.ಪಂ ಮಾಜಿ ಸದಸ್ಯರಾದ, ಕುರುಬ ಸಮಾಜದ ಮುಖಂಡ ಶಶಿಕಾಂತಗೌಡ ಪಾಟೀಲ, ವಿರೇಶ ಉಂಡೋಡಿ ಎಚ್ಚರಿಕೆ ನೀಡಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಜಂಟಿ ಸುದ್ದಿಗೋಷ್ಠಿ ನಡೆಸಿದಿ ಮುಖಂಡರು, ಡಿ.೯ ರಂದು ಆಯೋಜಿಸಿರುವ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ರದ್ದು ಮಾಡಬೇಕು. ಸಮಾಜದ ಗಮನಕ್ಕೆ ತರದೇ ರಾಜಕೀಯ ಸ್ವಾರ್ಥಕ್ಕಾಗಿ, ವೈಯಕ್ತಿಕ ಪ್ರತಿಷ್ಠೆಗಾಗಿ ಶಾಸಕ ದೊಡ್ಡನಗೌಡ ಪಾಟೀಲ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕ ದೊಡ್ಡನಗೌಡ ಪಾಟೀಲ ಅವರು ಸಮಾಜದ ಕೆಲವರನ್ನ ಕರೆದುಕೊಂಡು ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ಸರ್ವ ಸಮಾಜ ಹಾಗೂ ಪಕ್ಷಾತೀತವಾಗಿ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ ಮಾಡಲು ಸಮಾಜವು ಸಿದ್ದವಾಗಿದೆ. ಅದನ್ನು ಬಿಟ್ಟು ಶಾಸಕ ಪಾಟೀಲ ರಾಜಕೀಯ ಉದ್ದೇಶಕ್ಕಾಗಿ ಸಮಾಜದ ನಿರ್ಧಾರವನ್ನು ತಿರಸ್ಕರಿಸಿ ಏಕಾಏಕಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿ ಕೊಂಡಿದ್ದಕ್ಕೆ ನಾವು ವಿರೋಽಸುತ್ತೇವೆ ಎಂದು ಹೇಳಿದರು.
ಈ ಹಿಂದೆ ಎಸ್.ಆರ್. ನವಲಿಹಿರೇಮಠ ಅವರು ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಾರ್ಯಕ್ರಮಕ್ಕೆ ಹಣ ನೀಡಲು ಮುಂದೆ ಬಂದಿದ್ದರು. ರಾಜಕೀಯ ನಾಯಕರಿಂದ ತೆಗೆದುಕೊಳ್ಳುವುದು ಬೇಡ. ಸಮಾಜದಿಂದಲೇ ಮಾಡಬೇಕು ಎಂದು ನಿರ್ಧಾರವಾಗಿತ್ತು. ಈಗ ಅದನ್ನು ಮುರಿದು, ಒಡೆದು ಆಳುವ ನೀತಿ ಅನುಸರಿಸಲಾಗುತ್ತಿದೆ ಎಂದು ಟೀಕಿಸಿದರು.
ಹುನಗುಂದದಲ್ಲಿ ಸಮಾಜಕ್ಕೆ ಸೇರಿದ ೩ ಎಕರೆ ಜಾಗವಿದೆ. ದೊಡ್ಡನಗೌಡ ಪಾಟೀಲರು ಮೂರು ಬಾರಿ ಶಾಸಕರಾಗಿದ್ದಾರೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸಮ್ಮುಖದಲ್ಲಿ ೫ ಕೋಟಿ ರೂ.ಅನುದಾನ ನೀಡಲಾಗುವುದು ಎಂದಿದ್ದರು. ಇಲ್ಲಿಯವರೆಗೆ ಯಾವುದೇ ಅನುದಾನ ನೀಡಿಲ್ಲ ಎಂದು ದೂರಿದರು.

ಮುಖಂಡ ವೀರೇಶ ಉಂಡೋಡಿ ಮಾತನಾಡಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಒಂದು ಎಕರೆ ಭೂಮಿ ನೀಡಿದ್ದಾರೆ. ರಾಜ್ಯ ಸರ್ಕಾರ ನೀಡಿರುವ ೧ ಕೋಟಿ ರೂ.ಅನುದಾನವಿದೆ. ಮೂರ್ತಿ ಪ್ರತಿಷ್ಠಾಪನೆಗಾಗಿಯೇ ಸಮಾಜದ ಮುಖಂಡರು ೨೦ ಲಕ್ಷಕ್ಕೂ ರೂ. ಹೆಚ್ಚು ಹಣ ನೀಡಿದ್ದಾರೆ. ವೈಯಕ್ತಿಕವಾಗಿ ಹಣ ನೀಡಿ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜಕ್ಕೆ ಅನುದಾನ ನೀಡಲು ವಾಗ್ದಾನ ಮಾಡಿರುವುದನ್ನು ಕೆಲ ಮುಖಂಡರಿಂದ ನೆನಪಿಸಿದಾಗ ಶಾಸಕ ದೊಡ್ಡನಗೌಡ ಪಾಟೀಲ ಆ ಬಗ್ಗೆ ಬಾಯಿಬಿಟ್ಟು ಮಾತನಾಡಲಿಲ್ಲ. ಇಲ್ಲಿವರೆಗೂ ಸಮಾಜಕ್ಕೆ ಯಾವುದೇ ರೀತಿಯಲ್ಲಿ ಸಹಾಯ ಮಾಡಿಲ್ಲ. ಕೇವಲ ನಮ್ಮ ಸಮಾಜವನ್ನು ದುರುಪಯೋಗ ಪಡಿಸಿಕೊಂಡು ತಮ್ಮ ವ್ಯಕ್ತಿಗತ ಪ್ರತಿಷ್ಠೆಯಿಂದ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ವಿರೋಧದ ನಡುವೆ ಕಾರ್ಯಕ್ರಮ ನಡೆಸಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಶಾಸಕ ಪಾಟೀಲರಿಗೆ ಸಮಾಜದಿಂದ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದದ ಅವರು ಕಾರ್ಯಕ್ರಮ ಹಿನ್ನೆಲೆ ಅವಳಿ ನಗರದಲ್ಲಿ ಬ್ಯಾನರ್ ಕಟ್ಟಿದ್ದು, ನಮ್ಮ ಅನುಮತಿ ಇಲ್ಲದೇ ನಮ್ಮ ಭಾವಚಿತ್ರವನ್ನು ಬಳಿಸಿಕೊಂಡಿದ್ದಾರೆ. ಕೂಡಲೇ ಆ ಬ್ಯಾನರ್ ಗಳನ್ನು ತೆರವುಗೊಳಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗಂಗಾಧರ ದೊಡ್ಡಮನಿ, ವಿಜಯ ಮಹಾಂತೇಶ ಗದ್ದನಕೇರಿ, ನಿಂಬಣ್ಣ ಮುಕ್ಕನ್ನವರ, ದೇವು ಡಂಬಳ ಮತ್ತಿತರರು ಇದ್ದರು.