ಬೆಂಗಳೂರು : ಕನ್ನಡ ಸಾಹಿತ್ಯ ಕುರಿತು ಇಂಗ್ಲಿಷ್‌ನಲ್ಲಿ ಬರೆದು ಆ ಮೂಲಕ ಕನ್ನಡಕ್ಕೆ ಜಾಗತಿಕ ಮನ್ನಣೆ ದೊರಕಿಸಿ ಕೊಟ್ಟ ಕೀರ್ತಿ ಡಾ.ಜಿ.ಎಸ್.ಆಮೂರ ಅವರಿಗೆ ಸಲ್ಲುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನು ಬಳಿಗಾರ್ ಹೇಳಿದ್ದಾರೆ.
ಇತ್ತೀಚಿಗಷ್ಟೇ ಆಗಲಿದ ಖ್ಯಾತ ವಿಮರ್ಶಕ ಡಾ.ಜಿ.ಎಸ್.ಆಮೂರ, ಹಿರಿಯ ವಿದ್ವಾಂಸ ಹಿ.ಚಿ. ಶಾಂತವೀರಯ್ಯ ಹಾಗೂ ಖ್ಯಾತ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಮಂಗಳವಾರ ಕಸಾಪದಲ್ಲಿ ನುಡಿನಮನ ಸಲ್ಲಿಸಲಾಯಿತು.
ಆಮೂರ ಅವರನ್ನು ನೃಪತುಂಗ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ದುರದೃಷ್ಟವಶಾತ್ ಪ್ರಶಸ್ತಿ ಸ್ವೀಕರಿಸುವ ಮುನ್ನವೇ ಅವರು ನಮ್ಮನ್ನು ಆಗಲಿದ್ದಾರೆ. ಅವರ ಆಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕವು ಅಪರೂಪದ ಮೇಧಾವಿಯನ್ನು ಕಳೆದುಕೊಂಡಂತಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಯ ಸಂಪುಟ ಸೇರಿ ಹತ್ತಾರು ಗ್ರಂಥಗಳನ್ನು ರಚಿಸಿದ್ದ ಹಿ.ಚಿ.ಶಾಂತವೀರಯ್ಯ ಸಾಹಿತ್ಯ ಲೋಕಕ್ಕೆ ದೊಡ್ಡ ಕೊಡುಗೆ ನೀಡಿದ್ದರು. ಕನ್ನಡ ಸಂಗೀತ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕನ್ನಡ ಭಾಷೆ ಬಗ್ಗೆ ಇದ್ದ ಪ್ರೀತಿ ಅವರ್ಣನೀಯ ಎಂದು ಮನು ಬಳಿಗಾರ್ ಬಣ್ಣಿಸಿದರು.
ಎಂದಿಗೂ ಮರೆಯಲಾರೆ:
ನಾಲ್ಕೈದು ದಶಕಗಳ ಕಾಲ ಎಸ್‌ಪಿಬಿ ಅವರೊಡನೆ ಕಳೆದ ಒಡನಾಟ ಮತ್ತು ಅವಿನಾಭಾವ ಸಂಬಂಧವನ್ನು ಎಂದಿಗೂ ಮರೆಯಲಾರೆ. ನಾನು ರಚಿಸಿದ 300ಕ್ಕೂ ಹೆಚ್ಚು ಗೀತೆಗಳಿಗೆ ಅವರು ದನಿಯಾಗಿದ್ದಾರೆ. ಪರಸಂಗದ ಗೆಂಡೆತಿಮ್ಮ ಚಿತ್ರದ ನಿಸರ್ಗದ ಗೀತೆ ಬಾಲು ಹಾಡಿದ್ದು, ನನಗೆ ಜನಪ್ರಿಯತೆ ಗಳಿಸುವಂತೆ ಮಾಡಿತ್ತು. ಜಗತ್ತು ಕಂಡ ಶ್ರೇಷ್ಠ ಗಾಯಕರ ಸಾಮಿಗೆ ಅವರು ಸೇರುತ್ತಾರೆ ಎಂದು ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಸ್ಮರಿಸಿದರು.