ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕರೊನಾದಿಂದ ಶೈಕ್ಷಣಿಕ ವರ್ಷ ಆರಂಭ ಅನಿಶ್ಚಿತತೆಯಿಂದ ಕೂಡಿರುವುದರಿಂದ ಪ್ರತಿ ವರ್ಷದಂತೆ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳು ನಡೆಯುವುದು ಕಷ್ಟ.
ಪ್ರತಿ ವರ್ಷ ಏಪ್ರಿಲ್ ಅಥವಾ ಮಾರ್ಚ್ ಅವಧಿಯಲ್ಲಿ ಎರಡು ಪರೀಕ್ಷೆಗಳು ನಡೆಯುತ್ತಿದ್ದವು. ಆದರೆ, ಈ ಆಕ್ಟೋಬರ್ ಬಂದರೂ ಶಾಲಾ-ಕಾಲೇಜು ಆರಂಭವಾಗದೇ ಇರುವುದರಿಂದ ಪರೀಕ್ಷೆಗಳು ಸಹ ಈ ವರ್ಷ ಮುಂದೂಡುವ ಸಾಧ್ಯತೆ ಇದೆ.
ಪರೀಕ್ಷೆ ಆರು ತಿಂಗಳು ಇರುವಾಗಲೇ ಸಿದ್ಧತೆ ಆರಂಭವಾಗುತ್ತಿತ್ತು. ಆದರೆ, ಈ ಬಾರಿ ಶಾಲಾ-ಕಾಲೇಜು ಆರಂಭವಾಗಲಿ ಎಂದು ಪರೀಕ್ಷಾ ಮಂಡಳಿಗಳು ಕಾಯುತ್ತಿರುವುದರಿಂದ ಈ ವರ್ಷ ಪರೀಕ್ಷೆ ಸಿದ್ಧತೆಗಳು ನಡೆಯುತ್ತಿಲ್ಲ. ಈಗಾಗಲೇ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಶೇ.30 ಪಠ್ಯಕ್ರಮವನ್ನು ಕಡಿತ ಮಾಡಿ ಸರ್ಕಾರದ ಅನುಮತಿಗಾಗಿ ಕಳುಹಿಸಿದೆ. ಆದರೆ, ಈವರೆಗೂ ಅನುಮತಿ ಸಿಕ್ಕಿಲ್ಲ. ಈ ರೀತಿ ವಿಳಂಬವಾಗುತ್ತಿರುವುದರಿಂದ ಪರೀಕ್ಷೆಗಳನ್ನು ನಿಗದಿತ ಅವಧಿಗಿಂತ ಮುಂದೂಡುವುದು ಅನಿವಾರ್ಯವಾಗಲಿದೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ.
ಈ ವರ್ಷ ಕರೊನಾದಿಂದಲೇ ಮಾರ್ಚ್‌ನಲ್ಲಿ ನಡೆಯಬೇಕಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿದ್ದು ಮಾತ್ರ ಜೂನ್ ಕೊನೆಯ ವಾರದಲ್ಲಿ. ಪರಿಸ್ಥಿತಿ ಇದೇ ರೀತಿ ಮುಂದುವರೆದಲ್ಲಿ ಪರೀಕ್ಷೆಗಳು ಸಹ ಜೂನ್-ಜುಲೈ ಅವಧಿಯಲ್ಲೇ ನಡೆಸಬೇಕಾಗುತ್ತದೆ. ಈ ಕುರಿತು ಮುಂದಿನ ತಿಂಗಳಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಶೀಘ್ರ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.