ಚಿತ್ರದುರ್ಗ: ರಾಜ್ಯಾದ್ಯಂತ ಮೇ 9ರಂದು ಪ್ರಕಟವಾದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಅನುತ್ತೀರ್ಣಗೊಂಡ ಹಿನ್ನೆಲೆಯಲ್ಲಿ ಮನನೊಂದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಕೊಬ್ಬರಿ ಪೇಟೆಯ ವಾಸಿ ನಾಗರಾಜ್ ಎಂಬುವವರ ಪುತ್ರಿ ಧನುಶ್ರೀ (16) ಮೃತ ವಿದ್ಯಾರ್ಥಿನಿ.
11ರ ಶನಿವಾರದಂದು ನಾಗರಾಜ್ ಶಿವಮೊಗ್ಗಕ್ಕೆ ಆಸ್ಪತ್ರೆಗೆಂದು ತೆರಳಿದ್ದರು. ತಾಯಿ ಸಂಘದ ಹಣ ಪಾವತಿಸಲು ಹೊರಗೆ ಹೋಗಿದ್ದ ವೇಳೆ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾಳೆ.
ಎಸ್ಸೆಸ್ಸೆಲ್ಸಿಯ 4 ವಿಷಯಗಳಲ್ಲೂ ಧನುಶ್ರೀ ಫೇಲಾಗಿದ್ದಳು. ಅಂದಿನಿಂದ ಮನೆಯ ಹೊರಗೆ ಬಾರದೆ, ಖಿನ್ನತೆಗೆ ಒಳಗಾಗಿದ್ದಳು ಎಂಬ ಮಾಹಿತಿ ಇದೆ.
ಪಾಲಕರು ಪರೀಕ್ಷೆ ಕಟ್ಟಿ ಬರೆದು ಪಾಸು ಮಾಡಿಕೊಳ್ಳಬಹುದೆಂದು ಸಮಾಧಾನ ಪಡಿಸಿದ್ದರು. ಆದರೂ, ಆತುರದ ನಿರ್ಧಾರದಿಂದಾಗಿ ವಿದ್ಯಾರ್ಥಿನಿ ಜೀವವನ್ನೇ ಕಳೆದುಕೊಂಡಿದ್ದಾಳೆ.
ಹೊಸದುರ್ಗ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.