ಎಸ್ಸಿ, ಎಸ್ಟಿ ಮೀಸಲಾತಿ ಕುರಿತು ಅಧಿವೇಶನದಲ್ಲಿ ಚರ್ಚಿಸುವಂತೆ ಒತ್ತಾಯಿಸಿ ಮುಖಂಡರು ಶಾಸಕ ಯತೀಂದ್ರ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿದರು . 
ನ್ಯೂಸ್

ಎಸ್ಸಿ,ಎಸ್ಟಿ ಮೀಸಲಾತಿ ವಿಚಾರ ಚರ್ಚಿಸಲು ಮನವಿ

ತಿ.ನರಸೀಪುರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಳ ಮಾಡಲು ಸಿದ್ಧಗೊಂಡಿರುವ ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ವರದಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಸ್ವಾಭಿಮಾನಿ ಎಸ್‌ಸಿ, ಎಸ್‌ಟಿ ಸಂಘಟನೆಗಳ ಒಕ್ಕೂಟ ಹಾಗೂ ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ ಸದಸ್ಯರು ಶಾಸಕರಾದ ಯತೀಂದ್ರ ಸಿದ್ದರಾಮಯ್ಯ ಹಾಗೂ ಎಂ.ಅಶ್ವಿನ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.


ಪಟ್ಟಣದ ತಾಲೂಕು ಆಡಳಿತ ಸೌಧದ ಮುಂಭಾಗ ಮಿನಿ ವಿಧಾನಸೌಧದ ಆವರಣದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಳೆಗಾಲದ ಅಧಿವೇಶನದಲ್ಲಿ ಚರ್ಚಿಸುವಂತೆ ಪ್ರತ್ಯೇಕವಾಗಿ ಇಬ್ಬರೂ ಶಾಸಕರಿಗೆ ಮನವಿ ಸಲ್ಲಿಸಿದರು.


ಪ್ರಸ್ತುತ ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಜನಸಂಖ್ಯೆ ಹೆಚ್ಚಾಗಿದ್ದು, ಸದರಿ ನೀಡುತ್ತಿರುವ ಮೀಸಲಾತಿಯ ಪ್ರಮಾಣ ಕಡಿಮೆ ಇದೆ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಶೇ.15 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ.3ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಆದರೆ ಈ ಎರಡು ವರ್ಗದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪರಿಷ್ಕರಣೆ ಮಾಡಲು ಸರ್ಕಾರವೇ ನ್ಯಾ.ನಾಗಮೋಹನ್ ದಾಸ್ ಆಯೋಗ ರಚನೆ ಮಾಡಿತ್ತು. ಆದರೆ, ವರದಿ ಸಿದ್ಧಗೊಂಡ ನಂತರ ಯಾವ ಸರ್ಕಾರ ಕೂಡ ವರದಿ ಜಾರಿಗೆ ಮನಸ್ಸು ಮಾಡಿಲ್ಲ ಎಂದು ಆರೋಪಿಸಿದರು.


ಪರಿಶಿಷ್ಟ ಜಾತಿ, ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಕ್ರಮವಾಗಿ ಶೇ.17 ಮತ್ತು ಶೇ.7 ರಷ್ಟು ಮೀಸಲಾತಿ ಹೆಚ್ಚಳದ ಬಗ್ಗೆ ಸದನದಲ್ಲಿ ಚರ್ಚಿಸುವಂತೆ ಇಬ್ಬರೂ ಶಾಸಕರಿಗೆ ಮನವಿ ಮಾಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು, ಈ ಬಗ್ಗೆ ಮಳೆಗಾಲದ ಅಧಿವೇಶನದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು.

ತಾಲೂಕು ನಾಯಕ ಸಂಘದ ಅಧ್ಯಕ್ಷ ಬನ್ನೂರು ಚಿಕ್ಕಯ್ಯ, ತಾಲೂಕು ಹೋರಾಟ ಸಮಿತಿ ಕಾರ್ಯದರ್ಶಿ ಆಲಗೂಡು ನಾಗರಾಜು, ತಾಲೂಕು ನಾಯಕ ಸಂಘದ ಮಾಜಿ ಅಧ್ಯಕ್ಷರಾದ ಹೊನ್ನನಾಯ್ಕ, ಎಂ.ಡಿ.ಬಸವರಾಜು,ಪುರಸಭೆ ಅಧ್ಯಕ್ಷ ಎಸ್.ಮದನ್ ರಾಜ್, ಸದಸ್ಯ ಬಾದಾಮಿಮಂಜು, ತಾಲೂಕು ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ, ಬಾಬು ಜಗಜೀವನರಾಮ್ ಸಂಘದ ಅಧ್ಯಕ್ಷ ಮಲಿಯೂರು ಶಂಕರ್, ಕರೋಹಟ್ಟಿ ಪ್ರಭುಸ್ವಾಮಿ, ಅಮಾಸೆ ಲಿಂಗರಾಜು, ಗೋವಿಂದರಾಜು, ಎ.ಜೆ.ವೆಂಕಟೇಶ್, ಬಿಎಸ್‌ಪಿ ಮುಖಂಡ ಪುಟ್ಟಸ್ವಾಮಿ, ಕೃಷ್ಣಮೂರ್ತಿ,ಯಡದೊರೆ ಮಹದೇವ, ಹೆಮ್ಮಿಗೆ ಸೋಮಣ್ಣ, ಡಾ.ಮಹದೇವಯ್ಯ, ಶಶಿದರ್,ಮರುಡಯ್ಯ ಸೇರಿದಂತೆ ಮತ್ತಿತರರಿದ್ದರು.