ನ್ಯೂಸ್

ಎಸ್‌ಟಿ ಸೇರ್ಪಡೆ ಕಡತದ ಅನುಸರಣ ವರದಿ ಶೀಘ್ರಕೇಂದ್ರಕ್ಕೆ,ಸಿಎಂ

ಚಿತ್ರದುರ್ಗ: ಕಾಡುಗೊಲ್ಲರ ಎಸ್‌ಟಿ ಸೇರ್ಪಡೆ ಕಡತದ ಅನುಸರಣ ವರದಿಯನ್ನು ಶೀಘ್ರ ಕೇಂದ್ರಕ್ಕೆ ಕಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ರಾಜ್ಯಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ. ಶಿವುಯಾದವ್ ತಿಳಿಸಿದ್ದಾರೆ.

ಬೆಂಗಳೂರಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ಎಸ್‌ಟಿ ಸೇರ್ಪಡೆಗೆ ಇರುವ ಅಡೆತಡೆಗಳು, ಕಾಡುಗೊಲ್ಲ ಸಮುದಾಯದ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು.

ಡಾ. ಅನ್ನಪೂರ್ಣಮ್ಮ ಅವರ ಕುಲಶಾಸ್ತ್ರ ಅಧ್ಯಯನ ವರದಿಯನ್ನು ರಾಜ್ಯಸರ್ಕಾರ 2014ರಲ್ಲಿ ಕೇಂದ್ರಕ್ಕೆ ಕಳಿಸಿದೆ. ಆದರೆ, ಅಲ್ಲಿಂದ ಈವರೆಗೂ ಕೇಂದ್ರ ಸರ್ಕಾರ ಕ್ರಮ ವಹಿಸಿಲ್ಲ. ಅನವಶ್ಯಕ ಪ್ರಶ್ನೆಗಳೊಂದಿಗೆ ಮೂರು ಬಾರಿ ರಾಜ್ಯ ಸರ್ಕಾರದಿಂದ ಅನುಸರಣ ವರದಿ ಕೇಳಿದೆ.

ಈಗಾಗಲೇ ಎರಡು ಸಾರಿ ಅನುಸರಣ ವರದಿ ಕಳುಹಿಸಿದ್ದರೂ ಮತ್ತೆ ಕೇಳಿದೆ. ಮೀಸಲಾತಿ ವಿರೋಧಿ ಕೇಂದ್ರ ಸರ್ಕಾರ ಕಾಡುಗೊಲ್ಲ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಬುಡಕಟ್ಟು ಲಕ್ಷಣಗಳಿದ್ದರೂ ಮೀನಮೇಷ ಎಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂದುವರಿದ ಜಾತಿಗಳಿಗೆ ಶೇ.10 ಮೀಸಲು ಕೊಟ್ಟಿರುವ ಮೋದಿ ಸರ್ಕಾರ ಕಾಡುಗೊಲ್ಲರನ್ನು ಕಡೆಗಣಿಸುತ್ತಿದೆ. ಕಳೆದ ಚುನಾವಣೆ ವೇಳೆ ಬಿಜೆಪಿ, ಜೆಡಿಎಸ್ ನಾಯಕರು ಕೆಲವೇ ದಿನಗಳಲ್ಲಿ ಎಸ್‌ಟಿ ಪಟ್ಟಿಗೆ ಸೇರಿಸುತ್ತೇವೆ ಎಂದು ಭರವಸೆ ನೀಡಿ ವಂಚಿಸಿವೆ.

ಆದ್ದರಿಂದ ಕೇಂದ್ರಕ್ಕೆ ವರದಿ ಕಳಿಸಿ ಎಸ್‌ಟಿ ಸೇರ್ಪಡೆ ಜವಾಬ್ದಾರಿಯನ್ನು ತಾವೇ ವಹಿಸಬೇಕೆಂದು ಸಿಎಂಗೆ ಮನವಿ ಮಾಡಲಾಗಿದೆ ಎಂದು ಶಿವುಯಾದವ್ ತಿಳಿಸಿದ್ದಾರೆ.

ಈ ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ನಾಗರಾಜ್‌ಯಾದವ್, ಕಾಡುಗೊಲ್ಲ ಸಂಘಟನೆಗಳ ಒತ್ತಾಯದಂತೆ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿದೆ. ಕಾಡುಗೊಲ್ಲರನ್ನು ಮುಖ್ಯವಾಹಿನಿಗೆ ತರಲು ಎಸ್‌ಟಿ ಪಟ್ಟಿಗೆ ಸೇರಿಸಬೇಕು. ಅಲೆಮಾರಿ ಪಟ್ಟಿಗೆ ಸೇರಿಸಿ ಸೌಲಭ್ಯಗಳನ್ನು ಹಂಚಿಕೆ ಮಾಡಬೇಕು. ಅಭಿವೃದ್ಧಿ ನಿಗಮಕ್ಕೆ ಕಾಡುಗೊಲ್ಲರನ್ನೇ ಅಧ್ಯಕ್ಷರನ್ನಾಗಿ ನೇಮಿಸಬೇಕು. ಆದಾಯ ಮಿತಿ ರದ್ದುಗೊಳಿಸುವುದು ಸೇರಿ ನಾನಾ ಬೇಡಿಕೆಗಳ ಕುರಿತಂತೆ ಸಿಎಂಗೆ ಮನವಿ ಮಾಡಿದರು.

ಶ್ರೀ ವಣಕಲ್ ಮಠದ ಶ್ರೀ ರಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತುಮಕೂರು ಕಾಡುಗೊಲ್ಲರ ಸಂಘದ ಜಿಲ್ಲಾಧ್ಯಕ್ಷ ಚಂಗಾವರದ ಕರಿಯಪ್ಪ, ಮೀಸೆ ಮಹಾಲಿಂಗಪ್ಪ ಸೇರಿ ಸಂಘಟನೆಗಳ ಮುಖಂಡರು, ಸಂಬಂಧಿಸಿದ ಅಧಿಕಾರಿಗಳು ಸಭೆಯಲ್ಲಿದ್ದರು.