ನ್ಯೂಸ್

ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆಗೆ ಶಾಸಕ ಕೊತ್ತೂರು ಮಂಜುನಾಥ್ ದಿಢೀರ್ ಭೇಟಿ / ರೋಗಿಗಳಿಂದ ಮಾಹಿತಿ ಪಡೆದ ಶಾಸಕ / ಖಾಸಗಿ ಆಸ್ಪತ್ರೆಗಳಿಗೆ ಮತ್ತು ಖಾಸಗಿ ಆಂಬುಲೆನ್ಸ್ಗಳಿಗೆ ರೋಗಿಗಳನ್ನು ಕಳುಹಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು / ವೈದ್ಯರು ಮತ್ತು ಸಿಬ್ಬಂದಿಗೆ ಎಚ್ಚರಿಕೆ

ವಿಜಯವಾಣಿ ಸುದ್ದಿಜಾಲ ಕೋಲಾರ

ನಗರದ ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆಗೆ ಶನಿವಾರ ಶಾಸಕ ಕೊತ್ತೂರು ಮಂಜುನಾಥ್ ದಿಢೀರ್ ಭೇಟಿ ನೀಡಿ, ಆಸ್ಪತ್ರೆಯ ಮೂಲಸೌಕರ್ಯ ಹಾಗೂ ಕುಂದು ಕೊರತೆಗಳ ಬಗ್ಗೆ ಪರಿಶೀಲಿಸಿದರು.

ಆಸ್ಪತ್ರೆಯ ವೈದ್ಯರು ಸೇರಿದಂತೆ ಸಿಬ್ಬಂದಿಯ ಹಾಜರಾತಿ ಪುಸ್ತಕ, ಆಡಳಿತದ ಖರ್ಚು ವೆಚ್ಚದ ಕಡತಗಳನ್ನು ಪರಿಶೀಲಿಸಿ, ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಿರಬೇಕು ಎಂದು ಸೂಚಿಸಿದರು. ನಂತರ ವಿವಿಧ ವಾರ್ಡ್ಗಳಿಗೆ ತೆರಳಿ ರೋಗಿಗಳ ಆರೋಗ್ಯ ವಿಚಾರಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮಲೇರಿಯಾ ಮತ್ತು ಡೆಂಗ್ಯೂ ಅಂತಹ ಖಾಯಿಲೆಗಳು ಹೆಚ್ಚಾಗುತ್ತಿದ್ದು, ಖಾಯಿಲೆಗಳು ಬರದಂತೆ ಸ್ವಚ್ಚತೆ ಕಾಪಾಡಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನಗರಸಭೆ ಹಾಗೂ ಆಸ್ಪತ್ರೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದರು.

ಖಾಸಗಿ ಆಸ್ಪತ್ರೆಗಳ ಮಾಫೀಯಾ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇಲ್ಲಿಗೆ ಬರುವ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡಬಾರದು. ಹಾಗೂ ಹೊರಗಿನ ಔಷಧಿಗಳಿಗೆ ಚೀಟಿ ಬರೆದುಕೊಟ್ಟಲ್ಲಿ ಸೂಕ್ತ ಕ್ರಮವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರಲ್ಲದೆ ಇಲ್ಲಿನ ಸಿಬ್ಬಂದಿ ರೋಗಿಗಳು ಆಸ್ಪತ್ರೆಗೆ ಬಂದ ನಂತರ ಅವರನ್ನು ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ಯುವುದು ಹಾಗೂ ಖಾಸಗಿ ಆಂಬುಲೆನ್ಸ್ಗಳಿಗೆ ಶಿಫಾರಸ್ಸು ಮಾಡಿದರೆ ಅಂತಹ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಲು ಸರ್ಜನ ಡಾ.ಜಗದೀಶ್ ರವರಿಗೆ ಶಾಸಕರು ಸೂಚಿಸಿದರು.

ಆಸ್ಪತ್ರೆಯ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು. ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದರ ಜೊತೆಗೆ ಸೌಜನ್ಯವಾಗಿ ವರ್ತಿಸಬೇಕು. ದಿನನಿತ್ಯ ಸುಮಾರು ೧೨೦೦ ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಹೊರರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಜೊತೆಗೆ ರಕ್ಷಣೆಯ ದೃಷ್ಟಿಯಿಂದ ತಾಯಿ ಮಕ್ಕಳ ವಾರ್ಡ್ನಲ್ಲಿ ಪಾಸ್ ಮತ್ತು ಟ್ಯಾಗ್ ಕಡ್ಡಾಯವಾಗಿ ನೀಡಿ, ಅವರ ಬಗ್ಗೆ ನಿಗಾ ವಹಿಸಬೇಕು. ಸುಮಾರು ಹತ್ತು ಕೋಟಿ ವೆಚ್ಚದಲ್ಲಿ ಸಣ್ಣ ಪುಟ್ಟ ಕಾಮಗಾರಿಗಳು ನಡೆಯುತ್ತಿವೆ. ಮೂಲಭೂತ ಸೌಕರ್ಯಗಳನ್ನು ಒದಗಿಸಿದ ನಂತರ ಎಲ್ಲಾ ಸೌಲಭ್ಯಗಳನ್ನು ಒಂದೇ ಕಡೆಯಲ್ಲಿ ಸಿಗುವಂತೆ ಮಾಡಲಾಗುತ್ತದೆ ಎಂದರು

ಜಿಲ್ಲಾ ಆಸ್ಪತ್ರೆಯಲ್ಲಿ ಸಣ್ಣ ಪುಟ್ಟ ಸಮಸ್ಯೆ ಇದ್ದೇ ಇರುತ್ತದೆ. ಇಲ್ಲ ಅಂತ ಹೇಳಿಲ್ಲ ಅದನ್ನು ವೈದ್ಯರು ಮತ್ತು ಸಿಬ್ಬಂದಿ ತಿದ್ದಿಕೊಳ್ಳಬೇಕು. ಇಲ್ಲಿ ಪಾರ್ಕಿಂಗ್ ಸಮಸ್ಯೆಯ ಜೊತೆಗೆ ಖಾಸಗಿ ಆಂಬುಲೆನ್ಸ್ಗಳ ಹಾವಳಿ ಹೆಚ್ಚಾಗಿದೆ. ಮುಂದೆ ಎಲ್ಲವೂ ಸರಿಹೋಗುತ್ತದೆ ಎಂದರು.

ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಜಿಲ್ಲಾ ಸರ್ಜನ್ ಜಗದೀಶ್, ಮುಖಂಡ ಮೈಲಾಂಡಹಳ್ಳಿ ಮುರಳಿ ಸೇರಿದಂತೆ ವೈದ್ಯರು ಸಿಬ್ಬಂದಿ ಇದ್ದರು.

ಚಿತ್ರ ೨೧ ಕೆ.ಎಲ್.ಆರ್. ೦೩ : ಎಸ್.ಎನ್.ಆರ್. ಆಸ್ಪತ್ರೆಯಲ್ಲಿ ಭೇಟಿ ನೀಡಿದ ಶಾಸಕ ಕೊತ್ತೂರು ಮಂಜುನಾಥ್ ರೋಗಿಗಳ ಆರೋಗ್ಯ ಮತ್ತು ಆಸ್ಪತ್ರೆಯ ಸಮಸ್ಯೆಗಳನ್ನು ಆಸಲಿಸಿದರು. ಜಿಲ್ಲಾ ಸರ್ಜನ್ ಜಗದೀಶ್, ಮೈಲಾಂಡಹಳ್ಳಿ ಮುರಳಿ ಇದ್ದರು.