ನ್ಯೂಸ್

ಎಸಿಬಿ ಬಲೆಗೆ ಸಿಡಿಪಿಒ ಉಸ್ತುವಾರಿ ರೂಪಾ

ಬಂಗಾರಪೇಟೆ ಗ್ರಾಮಾಂತರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ಉಸ್ತುವಾರಿ ಆಗಿರುವ ಎಫ್​ಡಿಎ ಮಹಿಳಾ ನೌಕರರೊಬ್ಬರು ಪಟ್ಟಣದಲ್ಲಿ ಗುರುವಾರ ಲಂಚ ಪಡೆಯುವಾಗ ಎಸಿಬಿ ದಾಳಿಗೆ ಸಿಕ್ಕಿಬಿದ್ದಿದ್ದಾರೆ.


ಪಟ್ಟಣದ ಕೋಲಾರ ಮುಖ್ಯ ರಸ್ತೆಯಲ್ಲಿರುವ ಸಿಡಿಪಿಒ ಕಚೇರಿಯಲ್ಲಿ ಎಫ್​ಡಿಎ ಉದ್ಯೋಗಿಯಾಗಿರುವ ರೂಪಾ ಎಂಬಾಕೆಗೆ ಸಿಡಿಪಿಒ ರಮ್ಯಾ ರಜೆಯಲ್ಲಿರುವುದರಿಂದ ಉಸ್ತುವಾರಿ ನೀಡಲಾಗಿತ್ತು. ಕಚೇರಿಗೆ ಕಂಪ್ಯೂಟರ್​ ಆಪರೇಟರ್​ಗಳನ್ನು ಹೊರ ಗುತ್ತಿಗೆ ಆಧಾರದ ಮೇರೆಗೆ ನೇಮಿಸಿಕೊಳ್ಳಲು ಟೆಂಡರ್​ ಕರೆಯಲಾಗಿತ್ತು. ಟೆಂಡರ್​ದಾರರ ಕಡತ ಪೈನಲ್​ ಮಾಡಲು ಲಂಚ ಪಡೆಯುತ್ತಿದ್ದಾಗ ಎಸಿಬಿಗೆ ಸಿಕ್ಕಿ ಬಿದ್ದಿದ್ದಾರೆ.


ಕಚೇರಿಗೆ ಹೊರ ಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್​ ಆಪರೇಟರ್​ಗಳನ್ನು ನೇಮಿಸಿಕೊಳ್ಳಲು ಇಲಾಖೆಯಿಂದ ಟೆಂಡರ್​ ಕರೆಯಲಾಗಿತ್ತು. ಇದರಲ್ಲಿ ಬೇತಮಂಗಲದ ಕಾವೇರಿ ಎಂಟರ್​ಪ್ರೆಸಸ್​ ಸೇರಿ ಮೂವರು ಟೆಂಡರ್​ ಹಾಕಿದ್ದರು. ಕಾವೇರಿ ಎಂಟರ್​ಪ್ರೆಸಸ್​ ಮೆನ್​ ಪವರ್​ ಅವರ ಎಲ್ಲ ದಾಖಲೆಗಳು ಸರಿಯಾಗಿದ್ದರೂ ಅದನ್ನು ನಿರಾಕರಿಸಿ ದಾಖಲೆ ಸಮರ್ಪಕವಾಗಿರದವರ ಟೆಂಡರ್​ದಾರರನ್ನು ಉಪ ನಿದೇರ್ಶಕರು ಕೋಲಾರ ಅನುಮೋದನೆಗೆ ಕಳುಹಿಸಿದ್ದರು. ಇದನ್ನು ಪ್ರಶ್ನಿಸಿ ಕಾವೇರಿ ಎಂಟರ್​ಪ್ರೆಸಸ್​ ಮಾಲೀಕರು ಇಲಾಖೆಯ ಉಪನಿದೇರ್ಶಕರಿಗೆ ದೂರು ನೀಡಿದ್ದರು.


ಅದರಂತೆ ಟೆಂಡರ್​ದಾರರ ದಾಖಲೆಗಳನ್ನು ಮರು ಪರಿಶೀಲನೆ ಮಾಡಿ ಕಳುಹಿಸಲು ಸೂಚಿಸಲಾಗಿತ್ತು. ಕಾವೇರಿ ಎಂಟರ್​ಪ್ರೆಸಸ್​ ಅವರ ಎಲ್ಲ ದಾಖಲೆಗಳು ಸರಿಯಾಗಿದ್ದರಿಂದ ಅದನ್ನು ಅನುಮೋದಿಸಲು 10ಸಾವಿರ ರೂ. ಲಂಚಕ್ಕೆ ಸಿಡಿಪಿಒ ಉಸ್ತುವಾರಿ ರೂಪಾ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅದರಂತೆ ಮೊದಲ ಕಂತಿನಂತೆ ಸಾವಿರ ರೂ. ಕೊಡಲಾಗಿತ್ತು. ನಂತರ 2 ಸಾವಿರ ರೂ., ಗುರುವಾರ 3 ಸಾವಿರ ರೂ. ಕೊಡಲು ಕಾವೇರಿ ಎಂಟರ್​ಪ್ರೆಸಸ್​ ಮಾಲೀಕರು ಕಚೇರಿಗೆ ಬಂದಾಗ ಕಚೇರಿಯಲ್ಲಿ ಸಿಸಿ ಕ್ಯಾಮರಾ ಇದೆ ಎಂದು ಹೇಳಿ ಕಚೇರಿ ಪಕ್ಕದಲ್ಲೆ ಇರುವ ಟೀ ಅಂಗಡಿಯಲ್ಲಿ ಹಣ ಪಡೆಯುವಾಗ ಎಸಿಬಿ ಡಿವೈಎಸ್​ಪಿ ಸುಧೀರ್​, ಇನ್​ಸ್ಪೆಕ್ಟರ್​ ಫಾರೂಕ್​ ಪಾಷಾ ದಾಳಿ ಮಾಡಿ ರೂಪಾ ಅವರನ್ನು ವಶಕ್ಕೆ ಪಡೆದಿದ್ದಾರೆ.