ಮೂಡಿಗೆರೆ: ತಾಲೂಕಿನ ಒಂದೇ ಒಂದೂ ಗ್ರಾಮವನ್ನು ಬಿಡದಂತೆ ಕಾಡಾನೆಗಳ ಗುಂಪು ಅಲ್ಲಲ್ಲಿ ಬೀಡುಬಿಟ್ಟಿದ್ದು ಜನ ಭಯದಿಂದ ವಾಸಿಸುವಂತಾಗಿದೆ. ಗದ್ದೆ, ತೋಟದ ಕೆಲಸಕ್ಕೆ ಹೋಗಲು ಹಿಂದುಮುಂದು ನೋಡುವಂತಾಗಿದೆ.
ಎರಡು ದಿನದ ಹಿಂದೆ ಹಳಸೆ ಗ್ರಾಮದಲ್ಲಿ 30ಕ್ಕೂ ಹೆಚ್ಚು ಕಾಡಾನೆಗಳು ಕಾಫಿತೋಟಕ್ಕೆ ಲಗ್ಗೆಯಿಟ್ಟಿದ್ದವು. ಆ ಗುಂಪು ಚದುರಿ 13 ಕಾಡಾನೆಗಳು 3 ಮರಿಗಳೊಂದಿಗೆ ಭಾನುವಾರ ಬೆಳಗಿನ ಜಾವ 3 ಗಂಟೆಗೆ ಅಣಜೂರು ಕಾಲನಿ ಬಳಿ ಕಂಡುಬಂದಿದೆ. ಬೆಳಗಾಗುವಷ್ಟರಲ್ಲಿ ಜನ್ನಾಪುರ ಪಟ್ಟಣಕ್ಕೆ ಸೇರಿಕೊಂಡಿದೆ. ಕಾಡಾನೆಗಳ ಗುಂಪು ಜನ್ನಾಪುರ ಪಟ್ಟಣದಲ್ಲಿರುವ ಸುದ್ದಿ ತಿಳಿದೊಡನೆ ಕಾಡಾನೆಗಳನ್ನು ನೋಡಲು ಸಾರ್ವಜನಿಕರು ಪಟ್ಟಣದಲ್ಲಿ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದರು.
ಅರಣ್ಯ ಇಲಾಖೆ ತಂಡ ಕಾಡಾನೆಗಳನ್ನು ಪಟ್ಟಣದಿಂದ ಹೊರಗಟ್ಟಲು ಪ್ರಯತ್ನಿಸಿದರೆ, ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ನಂತರ 3 ಮರಿಗಳೊಂದಿಗೆ 13 ಕಾಡಾನೆಗಳಿದ್ದ ಗುಂಪನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕದ ತೋಟಕ್ಕೆ ಅಟ್ಟಲಾಯಿತು. ಜನ್ನಾಪುರದ ತೋಟದಿಂದ ಕಾಡಾನೆ ಗುಂಪನ್ನು ಎತ್ತ ಅಟ್ಟುವುದೆಂದು ಅರಣ್ಯ ಇಲಾಖೆ ತಂಡಕ್ಕೆ ತಲೆನೋವಾಗಿದೆ. ಎತ್ತ ಓಡಿಸಿದರೂ ಜನವಸತಿ ಪ್ರದೇಶವಿರುವ ಕಾರಣ ಅನಾಹುತ ತಪ್ಪಿದ್ದಲ್ಲ. ಗೋಣಿಬೀಡು ಪಟ್ಟಣಕ್ಕೆ ಹೋದರೆ ಇನ್ನಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಅರಣ್ಯ ಇಲಾಖೆ ತಂಡಕ್ಕೆ ದಿಕ್ಕುತೋಚದಂತಾಯಿತು. ಸಂಜೆಯವರೆಗೂ ಕಾಡಾನೆ ಜನ್ನಾಪುರದ ತೋಟದಲ್ಲಿ ಬೀಡುಬಿಟ್ಟಿತ್ತು.