ನ್ಯೂಸ್

ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರ ಸಾಧನೆ ಅಪಾರ

ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರ ಸಾಧನೆ ಅಪಾರ. ದೇಶದ ಆರ್ಥಿಕ ವ್ಯವಸ್ಥೆ ಚೆನ್ನಾಗಿರಲು ಮಹಿಳೆಯರೇ ಮೂಲ ಕಾರಣ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ತಾಲೂಕಿನ ಜಯಪುರ ಗ್ರಾಮದ ಮರಮ್ಮ ಸಿದ್ದೇಗೌಡ ಫಂಕ್ಷನ್ ಹಾಲ್‌ನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಸಾಮೂಹಿಕ ಶ್ರೀ ಅಷ್ಟ ಲಕ್ಷ್ಮೀ ಪೂಜಾ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಸಾಮೂಹಿಕ ಶ್ರೀ ಅಷ್ಟ ಲಕ್ಷ್ಮೀ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಮೊದಲೆಲ್ಲಾ ಕುಟುಂಬ ನಿರ್ವಹಣೆ ಹೊರುತ್ತಿದ್ದರು. ಮಳೆಗಾಲ, ಚಳಿಗಾಲ ಎನ್ನದೆ ತಾವೇ ಎಲ್ಲ ಕೆಲಸ ಮಾಡುತ್ತಿದ್ದರು. ನಲ್ಲಿ, ಬೋರ್‌ವೆಲ್‌ಗಳು ಇರಲಿಲ್ಲ. ದೂರದಲ್ಲಿ ಇದ್ದಬಾವಿಗಳಿಂದ ನೀರು ಹೊತ್ತು ತರುತ್ತಿದ್ದರು. ಮಳೆಗಾಲದಲ್ಲಿ ಬಿಡುವು ಇಲ್ಲದಿದ್ದಾಗ ತಾವೇ ಎಲ್ಲ ಕೆಲಸ ಮಾಡಿಕೊಳ್ಳುತ್ತಿದ್ದರು. ಹಿಂದಿನ ಕಾಲದಲ್ಲಿ ಏಳೆಂಟು ಮಕ್ಕಳನ್ನು ಹೆಡೆದು ಸಾಕುತ್ತಿದ್ದರು. ಅಮೇಲೆ ಆರತಿಗೊಬ್ಬ-ಕೀರ್ತಿಗೊಬ್ಬ ಎನ್ನುವಂತೆ ಎರಡು ಮಕ್ಕಳಿಗೆ ಬಂದರು. ಈಗ ಒಂದು ಮಗುವಿಗೆ ಬಂದಿದ್ದಾರೆ ಎಂದು ಹೇಳಿದರು.

ಹೈನುಗಾರಿಕೆಯಿಂದ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ. ಎರಡು ಹಸುಗಳನ್ನು ಖರೀದಿಸಿ ಸಾಕಿದರೆ ಬದುಕು ಸಾಗಿಸಬಹುದು. ಮಹಿಳೆಯರು ತಾವು ಸಂಪಾದನೆ ಮಾಡಿದ್ದನ್ನು ಕೂಡಿಡಬೇಕು. ಯಶಸ್ವಿನಿ ಯೋಜನೆಯಡಿ ವಿಮೆ ಮಾಡಿಸಬೇಕು. ಕೆಲವರು ಆಸ್ಪತ್ರೆಗೆ ಸೇರಿಸಿದ ಮೇಲೆ ನಮ್ಮತ್ರ ಹಣವಿಲ್ಲ, ಆಸ್ಪತ್ರೆಗೆ ಹೇಳಬೇಕು, ಹಣ ಕಟ್ಟಲು ದುಡ್ಡಿಲ್ಲ ಎನ್ನುತ್ತಾರೆ. ಅದರ ಬದಲಿಗೆ ಒಂದು ವಿಮೆ ಮಾಡಿಸಿದರೆ ಕುಟುಂಬದ ಆರೋಗ್ಯ ವೆಚ್ಚವನ್ನು ಭರಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಮಕ್ಕಳಿಗೆ ಸಂಸ್ಕಾರ, ಒಳ್ಳೆಯ ವಿದ್ಯೆ, ಸುಸಂಸ್ಕೃತ ಬದುಕನ್ನು ಕಲಿಸಬೇಕು. ಸರ್ಕಾರಿ ಕೆಲಸವನ್ನು ಸದಾ ಅವಲಂಬಿಸಿದೆ ಸ್ವಯಂ ಉದ್ಯೋಗ ಕಂಡುಕೊಳ್ಳಬೇಕು. ಗುಡಿ ಕೈಗಾರಿಕೆಗಳನ್ನು ಆರಂಭಿಸಿ ಸ್ಥಳೀಯವಾಗಿ ಹಲವಾರು ವಸ್ತುಗಳನ್ನು ತಯಾರಿಸಿ ಮಾರುಕಟ್ಟೆ ಕಂಡುಕೊಳ್ಳಬೇಕು. ಇಂದು ಮಹಿಳೆಯರು ತಯಾರಿಸಿದ ಹಲವು ವಸ್ತುಗಳಿಗೆ ಬೇಡಿಕೆ ಬಂದಿದೆ. ಅದಕ್ಕೆ ತಕ್ಕಂತೆ ಮಹಿಳಾ ಸ್ವಯಂ ಸಂಘಗಳು ವಸ್ತುಗಳನ್ನು ತಯಾರಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಬರಡನಪುರದ ಶ್ರೀಪರಶಿವಮೂರ್ತಿ ಸ್ವಾಮೀಜಿ, ಶ್ರೀ ಅಷ್ಟಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷ ಜೆ.ಎಂ.ಜವರನಾಯಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಜಯಂತ್ ಪೂಜಾರಿ, ಗ್ರಾಪಂ ಅಧ್ಯಕ್ಷ ಮಹದೇವಯ್ಯ, ಹಿರಿಯ ನಿರ್ದೇಶಕ ವಿ.ವಿಜಯಕುಮಾರ್ ನಾಗನಾಳ, ಗೋಪಾಲಪುರ ಗ್ರಾಪಂ ಮಾಜಿ ಅಧ್ಯಕ್ಷ ಜಿ.ಕೆ. ಬಸವೇಗೌಡ, ಜಯಪುರ ಗ್ರಾಪಂ ಉಪಾಧ್ಯಕ್ಷೆ ಮಂಗಳಮ್ಮ, ಬಸವಣ್ಣ, ಟಿ.ಜಿ.ಶ್ವೇತಾ, ಸೋಮಣ್ಣ, ಜಿ.ಎಂ.ನಾಗೇಶ್, ವೆಂಕಟೇಶ್ ಇತರರಿದ್ದರು.