ನಂಜನಗೂಡು: ವರುಣ ಕ್ಷೇತ್ರ ನನಗೆ ಹೊಸದಲ್ಲ. ಈ ಬಾರಿ ಚಾಮರಾಜನಗರ ಮತ್ತು ವರುಣ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸುತ್ತೇನೆ ಎಂದು ಸಚಿವ ವಿ. ಸೋಮಣ್ಣ ಹೇಳಿದರು.
ಗುರುವಾರ ತಾಲೂಕಿನ ಮಲ್ಲನಮೂಲೆಯ ಮಠಕ್ಕೆ ಭೇಟಿ ನೀಡಿ ಶ್ರೀ ಚೆನ್ನಬಸವ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಶ್ರೀಕಂಠೇಶ್ವರ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕ್ಷೇತ್ರ ಮರುವಿಂಗಡಣೆಯಾಗಿ ವರುಣ ಕ್ಷೇತ್ರ ರಚನೆಯಾದ ವೇಳೆ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೆ. ವರುಣ ಕ್ಷೇತ್ರದಿಂದ ಪ್ರಥಮ ಬಾರಿಗೆ ಸಿದ್ದರಾಮಯ್ಯ ಸ್ಪರ್ಧಿಸಿದ್ದಾಗ ನಾನು ಕ್ಷೇತ್ರಾದ್ಯಂತ ಸುತ್ತಾಡಿ ಅವರ ಗೆಲುವಿಗೆ ಶ್ರಮಿಸಿದ್ದೇನೆ. ವರುಣ ಕ್ಷೇತ್ರದ ಜನರಿಗೆ ನನ್ನ ಪರಿಚಯವಿದ್ದು, ಚಾಮರಾಜನಗರ ಕ್ಷೇತ್ರ ನನ್ನ ಆರಾಧ್ಯ ದೈವ ಮಲೆ ಮಹದೇಶ್ವರಸ್ವಾಮಿ ನೆಲೆಸಿರುವ ಕ್ಷೇತ್ರ. ಎರಡೂ ಕ್ಷೇತ್ರದ ಜನರಿಗೆ ನನ್ನ ವೈಯಕ್ತಿಕ ಪರಿಚಯವಿರುವ ಕಾರಣ ಪಕ್ಷದ ವರಿಷ್ಠರು ನನ್ನ ಮೇಲೆ ನಂಬಿಕೆ ಇಟ್ಟು ಎರಡೂ ಕಡೆ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದಾರೆ. ಎರಡರಲ್ಲೂ ನನ್ನ ಗೆಲುವು ನಿಶ್ಚಿತ ಎಂದರು.
ಸಂಸದ ವಿ.ಶ್ರೀನಿವಾಸಪ್ರಸಾದ್ ಪಕ್ಷದ ಹಿರಿಯ ನಾಯಕರಾಗಿದ್ದು ಅವರ ಮಾರ್ಗದರ್ಶನ ಪಡೆದು ಚುನಾವಣೆ ಎದುರಿಸುತ್ತೇನೆ ಎಂದು ಹೇಳಿದರು.
ಸಂಸದ ಪ್ರತಾಪ್‌ಸಿಂಹ, ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ಮಹದೇವಯ್ಯ, ಬಿಜೆಪಿ ಮುಖಂಡರಾದ ಕೆ.ಕೆ. ಜಯದೇವ್, ಕುಂಬ್ರಳ್ಳಿ ಸುಬ್ಬಣ್ಣ, ನಗರಸಭಾಧ್ಯಕ್ಷ ಎಚ್.ಎಸ್. ಮಹದೇವಸ್ವಾಮಿ, ಖಾದಿ ಗ್ರಾಮೋದ್ಯೋಗ ಮಂಡಳಿ ನಿಗಮ ಮಾಜಿ ಅಧ್ಯಕ್ಷ ಎನ್.ಆರ್. ಕೃಷ್ಣಪ್ಪಗೌಡ, ಜಿಪಂ ಮಾಜಿ ಸದಸ್ಯರಾದ ಸದಾನಂದ, ಸಿದ್ದವೀರಪ್ಪ, ತಾಪಂ ಮಾಜಿ ಸದಸ್ಯ ಸಿ.ಎಂ. ಮಹದೇವಯ್ಯ, ತಾಲೂಕು ಬಿಜೆಪಿ ಅಧ್ಯಕ್ಷ ಪಿ. ಮಹೇಶ್ ಹೊರಳವಾಡಿ, ವರುಣ ಕ್ಷೇತ್ರದ ಬಿಜೆಪಿ ಅಧ್ಯಕ್ಷ ವಿಜಯಕುಮಾರ್ ಮತ್ತಿತರರಿದ್ದರು.