ನ್ಯೂಸ್

ಎರಡು ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆ: ಸಿಎಂ ಸ್ಪಷ್ಟನೆ

ಕೆಲವು ಶಾಸಕರು, ತಮ್ಮ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಶಾಸಕರು ಪಕ್ಷದ ಅಧ್ಯಕ್ಷರನ್ನು ಭೇಟಿಯಾದರೆ ತಪ್ಪೇನಿಲ್ಲ. ಎಲ್ಲರೂ ಕೂಡ ಅವರವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸ್ವತಂತ್ರರು. ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ವಸ್ತುಸ್ಥಿತಿ ವಿವರಿಸಿದ್ದೇನೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಎರಡು ದಿನದಲ್ಲಿ ಕೇಂದ್ರದಿಂದ ಪಟ್ಟಿ ಬರುವ ಸಾಧ್ಯತೆ ಇದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಯಾವ ಯಾವ ಸಚಿವರು ಸಂಪುಟಕ್ಕೆ ಸೇರ್ಪಡೆ ಮಾಡಬೇಕು, ಯಾರನ್ನು ತೆಗೆದುಕೊಳ್ಳಬೇಕು, ಯಾರನ್ನು ಕೈಬಿಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ. ಎರಡು, ಮೂರು ದಿನದೊಳಗೆ ಎಲ್ಲ ಊಹಾಪೋಹಗಳಿಗೆ ತೆರೆ ಬೀಳಲಿದೆ ಎಂದು ಹೇಳಿದರು.

ಈ ಬಾರಿ ಸಂಪುಟ ವಿಸ್ತರಣೆಯೋ ಇಲ್ಲವೇ ಪುನಾರಚನೆಯೋ ಎಂಬ ಪ್ರಶ್ನೆಗೆ, ಎರಡರಲ್ಲಿ ಒಂದಂತೂ ಖಚಿತ. ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಸದ್ಯದಲ್ಲಿ ನಿಗದಿಪಡಿಸಲಾಗುವುದು ಎಂದರು.

ಮುಖ್ಯಮಂತ್ರಿಯವರ ಪದಕ ಪ್ರದಾನ ಸಮಾರಂಭದ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದರು.

ಕುತೂಹಲ ಕೆರಳಿಸಿರುವ ಸಚಿವ ಸಂಪುಟ ವಿಸ್ತರಣೆ ಇನ್ನು ಎರಡು ಮೂರು ದಿನಗಳಲ್ಲಿ ನಡೆಯಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

ವಿಜಯವಾಣಿ ಸುದ್ದಿಜಾಲ ಬೆಂಗಳೂರು