ಬೆಟ್ಟದಪುರ: ಕಣ್ಣು ಮಾನವನ ದೇಹದ ಸೂಕ್ಷ್ಮ ಅಂಗವಾಗಿರುವುದರಿಂದ ಜಾಗರೂಕತೆಯಿಂದ ಅದನ್ನು ಕಾಪಾಡಿಕೊಳ್ಳಬೇಕು ಎಂದು ಕೆಪಿಸಿಸಿ ಸದಸ್ಯ ನಿತಿನ್ ವೆಂಕಟೇಶ್ ಸಲಹೆ ನೀಡಿದರು.
ಸಮೀಪದ ಬೆಟ್ಟದತುಂಗಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಒತ್ತಡದ ಜೀವನದಲ್ಲಿ ಆಹಾರ ಕ್ರಮದಿಂದಾಗಿ ನಿತ್ಯ ಆರೋಗ್ಯದಲ್ಲಿ ಒಂದಲ್ಲ ಒಂದು ಸಮಸ್ಯೆ ಕಾಡುತ್ತಿರುತ್ತದೆ. ಅದರಲ್ಲಿಯೂ ಗ್ರಾಮಾಂತರ ಭಾಗದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುವುದು ವಿರಳ. ಆರೋಗ್ಯವಂತರಾಗಿದ್ದರೆ ಏನನ್ನಾದರೂ ಸಾಧಿಸಬಹುದು. ಆದ್ದರಿಂದ ಪ್ರತಿಯೊಬ್ಬರೂ ಎರಡು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಜತೆಗೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅರವಿಂದ್ ರಾಜೇ ಅರಸ್ ಮಾತನಾಡಿ, ಗ್ರಾಮಾಂತರ ಭಾಗದಲ್ಲಿ ಕಣ್ಣಿನ ಸಮಸ್ಯೆ ವಯೋವೃದ್ಧರಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಗರ ಪ್ರದೇಶಗಳಿಗೆ ತೆರಳಿ ಚಿಕಿತ್ಸೆ ಪಡೆಯಲು ಆಗದ ಸ್ಥಿತಿ ಇದೆ. ಇದನ್ನು ಮನಗಂಡು ಗ್ರಾಮದಲ್ಲಿಯೇ ಶಿಬಿರ ಆಯೋಜಿಸಲಾಗಿದ್ದು, 150ಕ್ಕೂ ಹೆಚ್ಚು ವೃದ್ಧರು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅದರಲ್ಲಿ 13 ಜನರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸಂಘದ ಉಪಾಧ್ಯಕ್ಷ ಚೆಲುವಯ್ಯ, ನಿರ್ದೇಶಕರಾದ ವಿಜಯ್ ದೇವರಾಜೇ ಅರಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣ, ಮುಖಂಡರಾದ ಚಿಕ್ಕೇಗೌಡ, ಪ್ರಭುಗೌಡ, ಬಲರಾಮೇಗೌಡ, ಸತೀಶ್‌ರಾಜೇ ಅರಸ್, ಚೇತನ್, ಗಿರಿಮಲ್ಲೇಗೌಡ, ಕೃಷ್ಣೆಗೌಡ, ರಾಜು, ಮಲ್ಲಿಕಾರ್ಜುನ್, ರಾಮೇಗೌಡ, ಕೀರ್ತಿಪ್ರಕಾಶ್, ಅರುಣ್ ರಾಜೇ ಅರಸ್ ಇತರರು ಇದ್ದರು.