ನ್ಯೂಸ್

ಎರಡು ತಾಸಲ್ಲಿ ಒಮಿಕ್ರಾನ್ ಟೆಸ್ಟ್: ಐಸಿಎಂಆರ್ ಸಂಶೋಧಕರ ಸಾಧನೆ, ಮುಂದಿನ ವಾರ ಕಿಟ್?

ನವದೆಹಲಿ/ದಿಬ್ರುಗಢ: ಕರೊನಾ ವೈರಸ್​ನ ಹೊಸ ಪ್ರಭೇದ ಒಮಿಕ್ರಾನ್​ಅನ್ನು ಎರಡೇ ಗಂಟೆಯಲ್ಲಿ ಪತ್ತೆ ಹಚ್ಚುವ ಪರೀಕ್ಷಾ ಕಿಟ್ ಅಭಿವೃದ್ಧಿಪಡಿಸಿರುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಪ್ರಾದೇಶಿಕ ಸಂಶೋಧನಾ ಕೇಂದ್ರ (ಆರ್​ಎಂಆರ್​ಸಿ) ಹೇಳಿದೆ. ಈ ಕೇಂದ್ರ ಅಸ್ಸಾಂನ ದಿಬ್ರುಗಢದಲ್ಲಿದೆ. ಜಗತ್ತಿನಲ್ಲಿ ತಲ್ಲಣ ಸೃಷ್ಟಿಸಿರುವ, ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಂಡುಬಂದ ಒಮಿಕ್ರಾನ್ ವೈರಸ್​ನ ಗುಣಲಕ್ಷಣ, ಅದರ ಅಪಾಯ ಮೊದಲಾದ ಅಂಶಗಳನ್ನು ತಿಳಿಯಲು ವಿಜ್ಞಾನಿಗಳು, ವೈದ್ಯರು ಪ್ರಯತ್ನಿಸುತ್ತಿರುವ ನಡುವೆ ಇಂಥದ್ದೊಂದು ಕಿಟ್ ಶೋಧನೆಯಾಗಿ ರುವ ಸುದ್ದಿ ಟೆಸ್ಟ್​ಗಾಗಿ ವಿಮಾನ ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಪ್ರಯಾಣಿಕರಿಗೆ ಅನುಕೂಲವಾಗ ಬಹುದೆಂಬ ನಿರೀಕ್ಷೆ ಗರಿಗೆದರಿದೆ. ನವೆಂಬರ್ 24ರಿಂದ ಈ ಕಿಟ್ ತಯಾರಿಸಲು ವಿಜ್ಞಾನಿನಗಳ ತಂಡ ಪ್ರಯತ್ನ ನಡೆಸುತ್ತಿತ್ತು.

1000 ಸ್ಯಾಂಪಲ್ ಪರೀಕ್ಷೆ: ಸುಮಾರು ಒಂದು ಸಾವಿರಕ್ಕೂ ಅಧಿಕ ಕೋವಿಡ್ ರೋಗಿಗಳ ಸ್ಯಾಂಪಲ್​ಗಳನ್ನು ಈ ಕಿಟ್​ನಿಂದ ಪರೀಕ್ಷಿಸಲಾಗಿದೆ ಹಾಗೂ ಸ್ಕಾ್ಯನ್ ಮಾಡಲಾಗಿದೆ. ಒಮಿಕ್ರಾನ್ ಪತ್ತೆಯಾಗಿರುವ ಇತರ ರಾಜ್ಯಗಳ ರೋಗಿಗಳ ಕೆಲವು ಸ್ಯಾಂಪಲ್​ಗಳನ್ನು ಈ ಕಿಟ್​ನಿಂದ ಪರೀಕ್ಷಿಸಲಾಗಿದೆ. ಹೊಸ ರೂಪಾಂತರಿ ಪತ್ತೆ ಕಿಟ್​ನ ಲೈಸೆನ್ಸ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಮುಂದಿನ ವಾರ ಲ್ಯಾಬ್​ಗಳಿಗೆ ಲಭ್ಯವಾಗುವ ನಿರೀಕ್ಷೆಯಿದೆ. ಇದು ಹೈಡ್ರಾಲಿಸಿಸ್ ಶೋಧ ಆಧರಿತ ರಿಯಲ್-ಟೈಮ್ ಆರ್​ಟಿ-ಪಿಸಿಆರ್ ಸಾಧನ ಎಂದು ವಿನ್ಯಾಸ ಹಾಗೂ ಅಭಿವೃದ್ಧಿಗೊಳಿಸಿದ ತಂಡದ ನೇತೃತ್ವ ವಹಿಸಿದ್ದ ಬಿಶ್ವಜಿತ್ ಬೊರ್ಕಾಕೊಟಿ ಹೇಳಿದ್ದಾರೆ.

ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ: ಐಸಿಎಂಆರ್-ಆರ್​ಎಂಆರ್​ಸಿಯ ಈ ಕಿಟ್​ಅನ್ನು ಕೋಲ್ಕತಾದ ಜಿಸಿಸಿ ಬಯೋಟೆಕ್ ಕಂಪನಿ ಶೇಕಡ ನೂರರಷ್ಟು ಮೇಡ್ ಇನ್ ಇಂಡಿಯಾ ವಿಧಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುತ್ತಿದೆ. ಆರ್​ಟಿ-ಪಿಸಿಆರ್ ಸೌಲಭ್ಯವಿರುವ ಪ್ರಯೋಗಾಲಯಗಳಲ್ಲಿ ಈ ಟೆಸ್ಟ್ ಕಿಟ್ ಬಳಸಬಹುದಾಗಿದೆ. ಇದು ಆಂಟಿ-ಜೆನ್ ಟೆಸ್ಟ್ ಕಿಟ್​ನಂತೆ ಆನ್-ಸೈಟ್ ಟೆಸ್ಟ್ ಕಿಟ್ ಅಲ್ಲ.

10 ಡೋಸ್ ಲಸಿಕೆ!: ನ್ಯೂಜಿಲೆಂಡ್​ನಲ್ಲಿ ವ್ಯಕ್ತಿಯೊಬ್ಬ ಒಂದೇ ದಿನ 10 ಡೋಸ್ ಲಸಿಕೆ ಪಡೆದಿರುವ ಪ್ರಕರಣ ವರದಿಯಾಗಿದೆ. ತನಗೆ ದುಡ್ಡು ಕೊಟ್ಟ ಜನರ ಪರವಾಗಿ ಆತ ಲಸಿಕೆ ಕೇಂದ್ರಗಳಿಗೆ ಹೋಗಿ ಬೇರೆ ಬೇರೆಯವರ ಹೆಸರಿನಲ್ಲಿ ಲಸಿಕೆ ಹಾಕಿಸಿಕೊಂಡಿದ್ದು ಗೊತ್ತಾಗಿದೆ. ಆತನ ಆರೋಗ್ಯಕ್ಕೇನೂ ಅಪಾಯವಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ದೇಶದಲ್ಲಿ 38 ಒಮಿಕ್ರಾನ್ ಕೇಸ್: ಕೇರಳ, ಆಂಧ್ರ ಪ್ರದೇಶ ಮತ್ತು ಚಂಡೀಗಢದಲ್ಲಿ ಒಮಿಕ್ರಾನ್​ನ ತಲಾ ಒಂದು ಪ್ರಥಮ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದ ನಾಗಪುರ ಮತ್ತು ಬೆಂಗಳೂರಿನಲ್ಲಿ ಒಂದೊಂದು ಕೇಸ್ ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಹೊಸ ಪ್ರಭೇದದ ಕೇಸ್ ಸಂಖ್ಯೆ 38ಕ್ಕೆ ಏರಿದೆ. ಇಟಲಿಯಿಂದ ಆಗಮಿಸಿದ್ದ 20 ವರ್ಷದ ಯುವಕನಲ್ಲಿ ಒಮಿಕ್ರಾನ್ ರೂಪಾಂತರಿ ಇರುವುದು ಖಚಿತಪಟ್ಟಿದೆ ಎಂದು ಚಂಡೀಗಢದ ಆರೋಗ್ಯ ಇಲಾಖೆ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಈ ವ್ಯಕ್ತಿ ಫೈಜರ್ ಲಸಿಕೆಯ ಎರಡೂ ಡೋಸ್ ಪಡೆದಿದ್ದ. ಆಂಧ್ರ ಪ್ರದೇಶದಲ್ಲಿ ಒಮಿಕ್ರಾನ್ ರೂಪಾಂತರಿಯ ಮೊದಲ ಕೇಸ್ ಭಾನುವಾರ ಪತ್ತೆಯಾಗಿದೆ. ಐರ್ಲೆಂಡ್​ನಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ 34 ವರ್ಷದ ವ್ಯಕ್ತಿಯಲ್ಲಿ ಒಮಿಕ್ರಾನ್ ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇಂಗ್ಲೆಂಡಿನಿಂದ ಆಗಮಿಸಿದ 39ರ ಹರೆಯದ ಎರ್ನಾಕುಳಂ ನಿವಾಸಿಯಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ. ತಪಾಸಣೆಯಲ್ಲಿ ಸೋಂಕು ದೃಢಪಟ್ಟಿರುವುದಾಗಿ ಆರೋಗ್ಯ ಖಾತೆ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

ಬ್ರಿಟನ್​ನಲ್ಲಿ ಮೂರನೇ ಡೋಸ್ ಲಸಿಕೆ: ಒಮಿಕ್ರಾನ್ ವೈರಸ್ ಹರಡುವುದನ್ನು ತಡೆಯಲು ಬ್ರಿಟನ್ ಭಾನುವಾರ ಹೊಸ ಕ್ರಮಗಳನ್ನು ಪ್ರಕಟಿಸಿದೆ. 30 ವರ್ಷ ಮೇಲ್ಪಟ್ಟವರಿಗೆ ಲಸಿಕೆಯ ಬೂಸ್ಟರ್ ಡೋಸ್ ಹಾಕುವುದು ಇದರಲ್ಲಿ ಒಳಗೊಂಡಿದೆ. ಈ ಮಧ್ಯೆ, ಬ್ರಿಟನ್​ನಲ್ಲಿ ಮುಂದಿನ ವರ್ಷ ಏಪ್ರಿಲ್​ನೊಳಗೆ ಸುಮಾರು 25 ಸಾವಿರದಿಂದ 75 ಸಾವಿರ ಜನರು ಬಲಿಯಾಗಬಹುದು ಎಂದು ಅಧ್ಯಯನವೊಂದು ಎಚ್ಚರಿಸಿದೆ. ಬ್ರಿಟನ್​ನಲ್ಲಿ ಒಮಿಕ್ರಾನ್ ರೂಪಾಂತರಿಯ 600ಕ್ಕೂ ಹೆಚ್ಚು ಶನಿವಾರ ಕೇಸ್ ದೃಢಪಟ್ಟಿವೆ.

ವೈರಸ್​ನ ಹೊಸ ಪ್ರಭೇದ ಪ್ರತ್ಯಕ್ಷವಾದಾಕ್ಷಣ ಅದರಿಂದ ಕೆಟ್ಟದ್ದೇ ಆಗುವುದೆಂದು ಹೇಳಲಾಗುವುದಿಲ್ಲ. ಆದರೂ ಅವುಗಳ ಬಗ್ಗೆ ಯಾವುದನ್ನೂ ಖಚಿತವಾಗಿ ಹೇಳಲಾಗದು.

| ಪೂನಂ ಕ್ಷೇತ್ರಪಾಲ್ ಡಬ್ಲ್ಯುಎಚ್​ಒ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕಿ